ಆಟೋ, ಕ್ಯಾಬ್, ಖಾಸಗಿ ಬಸ್ ಚಾಲಕ, ಮಾಲೀಕರಿಂದ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಶಕ್ತಿ ಯೋಜನೆ ಜಾರಿಯಿಂದ ರಾಜ್ಯಾದ್ಯಂತ ಸಾರ್ವಜನಿಕ ಸೇವೆಯಲ್ಲಿರುವ ಆಟೋರಿಕ್ಷಾ, ಕ್ಯಾಬ್, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ಮಾಲೀಕರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ನಿಲ್ಲಬೇಕು, ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಲಾಯಿತು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಬಸ್‍ಗಳ ಚಾಲಕರು, ನಿರ್ವಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋ, ಟ್ಯಾಕ್ಸಿಗಳನ್ನು ಸಾಲ ಮಾಡಿ ಕೊಂಡುಕೊಂಡಿರುವ ಚಾಲಕರು ಬ್ಯಾಂಕ್‍ಗೆ ಬಡ್ಡಿ ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಬಡ್ಡಿ ಮನ್ನಾ ಮಾಡುವ ಮೂಲಕ ನಮ್ಮ ನೆರವಿಗೆ ನಿಲ್ಲಬೇಕು. ಅಸಂಘಟಿತ ಕಾರ್ಮಿಕರಾದ ಆಟೋರಿಕ್ಷಾ, ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ಖಾಸಗಿ ಬಸ್‍ಗಳ ಚಾಲಕರು, ಎಲೆಕ್ಟ್ರೀಷಿಯನ್, ಮೆಕ್ಯಾನಿಗಳು ಸೇರಿದಂತೆ ಇದನ್ನೇ ನಂಬಿ ಬದುಕುವ ಕಾರ್ಮಿಕರ ಕಲ್ಯಾಣಕ್ಕೆ ಸಾರಿಗೆ ಇಲಾಖೆಯಡಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಊಬರ್, ರ?ಯಾಪಿಡೊ, ಬೈಕ್ ಟ್ಯಾಕ್ಸಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಪಘಾತ, ದುರ್ಘಟನೆ ಸಂಭವಿಸಿದಾಗ 10 ಲಕ್ಷ ಸಹಾಯಧನ ನೀಡುವುದರ ಜತೆಗೆ ಭವಿಷ್ಯನಿಧಿಯಡಿ ಕಾರ್ಮಿಕರನ್ನು ನೋಂದಾಯಿಸಿ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಪ್ರಯಾಣಿಕರಿಗೆ ಕಾಯುತ್ತಿದ್ದರೂ ಸಂಚಾರಿ ಪೆÇಲೀಸರು ದಂಡ ಹಾಕುತ್ತಿದ್ದು, ಇದನ್ನು ತಡೆಯಬೇಕು. ಚಾಲಕ ಸಮೀವುಲ್ಲಾ ಆತ್ಮಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. ಚಾಲನ ಪರವಾನಗಿ ಪತ್ರಗಳ ನವೀಕರಣಕ್ಕೆ ವಿಳಂಬವಾಗುತ್ತಿದ್ದು, ಲಂಚಕ್ಕೆ ಒತ್ತಾಯ ಮಾಡುತ್ತಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು. ಮೈಸೂರಿನಲ್ಲಿ ಈಗಾಗಲೇ ಆಟೋರಿಕ್ಷಾ ಸಂಖ್ಯೆ ಹೆಚ್ಚಾಗಿದ್ದು, ನಿಲ್ಲಿಸಲು ಸ್ಥಳಾವಕಾಶವೇ ಇಲ್ಲ. ಹೀಗಾಗಿ ಮುಂದಿನ 5 ವರ್ಷ ಆಟೋರಿಕ್ಷಾಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಆಟೋರಿಕ್ಷಾ ಚಾಲಕರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು 20ಕ್ಕೂ ಹೆಚ್ಚು ಆಟೋಗಳಲ್ಲಿ ಬೆಂಗಳೂರಿಗೆ ತೆರಳಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸಮಿತ್ರ, ಪ್ರಧಾನ ಕಾರ್ಯದರ್ಶಿ ಸುನಿಲ್‍ಕುಮಾರ್.ಪಿ, ಕಾರ್ಯಾಧ್ಯಕ್ಷ ಎಂ.ಹೆಚ್.ಕಿರಣ್, ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‍ಕುಮಾರ್ ಗೌಡ, ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ಸುರೇಶ್ ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.