ಆಟೋದಲ್ಲಿ ಮರೆತು ಹೋಗಿದ್ದ 22 ತೊಲೆ ಚಿನ್ನಾಭರಣದ ಬ್ಯಾಗ್ ಮರಳಿ ಮಹಿಳೆಗೆ

ಕಲಬುರಗಿ,ಫೆ.19-ಆಟೋದಲ್ಲಿ ಮರೆತು ಹೋಗಿದ್ದ 13.42 ಲಕ್ಷ ರೂ.ಮೌಲ್ಯದ 22 ತೊಲೆ ಚಿನ್ನಾಭರಣವಿದ್ದ ಬ್ಯಾಗ್‍ನ್ನು ಮರಳಿ ಮಹಿಳೆಗೆ ಒಪ್ಪಿಸುವಲ್ಲಿ ಅಶೋಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹಳೇ ಜೇವರ್ಗಿ ರಸ್ತೆಯ ಎಸ್‍ಬಿಐ ಕಾಲೋನಿಯ ರೇಖಾ ಲಕ್ಷ್ಮೀಸಾಗರ ಮೇಳಕುಂದಿ ಅವರು ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬಸವಕಲ್ಯಾಣಕ್ಕೆ ಹೋಗಲು ನಗರದ ಸಂತೋಷ ಕಾಲೋನಿಯಿಂದ ಆಟೋ ಹತ್ತಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಬೇಕರಿ ಹತ್ತಿರ ಆಟೋದಿಂದ ಇಳಿದು ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಆಟೋದಿಂದ ಇಳಿಯುವಾಗ 13.42 ಲಕ್ಷ ರೂ.ಮೌಲ್ಯದ 22 ತೊಲೆಯ ಬಂಗಾರದ ಚಿನ್ನಾಭರಣವಿದ್ದ ಬ್ಯಾಗ್‍ನ್ನು ಮರೆತು ಆಟೋದಲ್ಲಿ ಬಿಟ್ಟು ಹೋಗಿದ್ದಾರೆ. ಬಸ್ ನಿಲ್ದಾಣಕ್ಕೆ ಹೋದ ಮೇಲೆ ಬ್ಯಾಗ್ ಆಟೋದಲ್ಲಿಯೇ ಬಿಟ್ಟಿರುವುದು ನೆನಪಾಗಿ ಮರಳಿ ಬಂದು ಆಟೋ ಹುಡುಕಾಡಿದ್ದಾರೆ. ಆಟೋ ಕಾಣದೇ ಹೋದಾಗ ಅವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣಕುಮಾರ ಅವರ ಮಾರ್ಗದರ್ಶನದಲ್ಲಿ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಅಶೋಕನಗರ ಪೊಲೀಸ್ ಠಾಣೆ ಪಿಐ ಮಹಾಂತೇಶ, ಸಿಬ್ಬಂದಿಗಳಾದ ನೀಲಕಂಠರಾಯ ಪಾಟೀಲ ಅವರು ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆಟೋ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಆಟೋ ಚಾಲಕನ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಆಟೋಚಾಲಕ ಬಂಗಾರದ ಆಭರಣಗಳಿದ್ದ ಬ್ಯಾಗ್‍ನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆ ನಂತರ ಬಂಗಾರದ ಆಭರಣಗಳಿದ್ದ ಬ್ಯಾಗ್‍ನ್ನು ಮಹಿಳೆಗೆ ಒಪ್ಪಿಸಿದ್ದಾರೆ.