ಆಟೋದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳ ಸಾಗಾಟ: 162 ಪ್ರಕರಣ ದಾಖಲಿಸಿ 32400ರೂ.ಗಳ ದಂಡ ವಸೂಲಿ

ಕಲಬುರಗಿ,ಜು.13: ನಿಗದಿತ ಮಿತಿಗಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ಸಾಗಿಸುತ್ತಿರುವುದರ ವಿರುದ್ಧ ಸಂಚಾರಿ ಠಾಣೆಯ ಪೋಲಿಸರು ಕಾರ್ಯಾಚರಣೆ ಕೈಗೊಂಡು ವಾಹನಗಳಲ್ಲಿ ಲಭ್ಯವಿರುವ ಆಸನಗಳಿಗಿಂತ ಹೆಚ್ಚಾಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಸೇರಿದಂತೆ ವಾಹನಗಳನ್ನು ಪತ್ತೆ ಹಚ್ಚಿ ಸುಮಾರು 162 ಪ್ರಕರಣಗಳನ್ನು ದಾಖಲಿಸಿ, 32400ರೂ.ಗಳ ದಂಡವನ್ನು ವಸೂಲಿ ಮಾಡಿದರು.
ಕಳೆದ ಜುಲೈ 1ರಂದು ಸಂಚಾರಿ ಠಾಣೆಯ ಒಂದರ ಪೋಲಿಸರು ಸೆಂಟ್ ಮೇರಿ ಸ್ಕೂಲ್, ಸೆಂಟ್ ಜೋಸೆಫ್ ಸ್ಕೂಲ್, ಎಸ್‍ಆರ್‍ಎನ್ ಮೆಹತಾ ಸ್ಕೂಲ್, ನೋಬೆಲ್ ಸ್ಕೂಲ್ ಮತ್ತು ಎಸ್.ಬಿ. ಸ್ಕೂಲ್ ಹಾಗೂ ಸಂಚಾರಿ ಠಾಣೆಯ 2ರ ಪೋಲಿಸರು ಅಮಿತ್ ಪಾಟೀಲ್ ಸ್ಕೂಲ್, ಗೋದುತಾಯಿ ಸ್ಕೂಲ್, ಮಿಲೇನಿಯಂ ಸ್ಕೂಲ್, ಚಂದ್ರಕಾಂತ್ ಪಾಟೀಲ್ ಸ್ಕೂಲ್, ಮಹರ್ಷಿ ವಿದ್ಯಾ ಮಂದಿರ ಮುಂತಾದ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ವಾಹನಗಳನ್ನು ಪರಿಶೀಲಿಸಿದರು. ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ ವಾಹನಗಳನ್ನು ತಡೆದು ಚಾಲಕರಿಗೆ ದಂಡ ವಿಧಿಸುವ ಕಾರ್ಯದಲ್ಲಿ ತೊಡಗಿದರು. ಅಲ್ಲದೇ ಎಚ್ಚರಿಕೆಯನ್ನೂ ಸಹ ಕೊಟ್ಟಿದದರು.
ಒಂದು ಆಟೋದಲ್ಲಿ ಆರು ಜನ ವಿದ್ಯಾರ್ಥಿಗಳಿಗೆ ಮಾತ್ರ ಸಾಗಿಸುವುದಕ್ಕೆ ಅನುಮತಿ ಇದ್ದು, ಒಂದು ಆಟೋದಲ್ಲಿ 11 ಮತ್ತು 12 ಜನ ವಿದ್ಯಾರ್ಥಿಗಳನ್ನು ಕುಳ್ಳಿರಿಸಿಕೊಂಡು ಸಂಚರಿಸುತ್ತಿದ್ದ ಹಲವಾರು ಸ್ಥಳಗಳಲ್ಲಿ ಸಂಚಾರಿ ಠಾಣೆಯ ಪೋಲಿಸರು ತಡೆದು ಚಾಲಕರಿಗೆ ದಂಡ ವಿಧಿಸಿದರು. ಚಾಲಕನ ಸೀಟಿನ ಅಕ್ಕ, ಪಕ್ಕ ವಿದ್ಯಾರ್ಥಿಗಳನ್ನು ಹಾಕಿಕೊಂಡು ಹಾಗೂ ಹಿಂಬದಿಯ ಸೀಟಿನಲ್ಲಿಯೂ ಸಹ ಏಳೆಂಟು ವಿದ್ಯಾರ್ಥಿಗಳನ್ನು ಸಾಗಿಸುತ್ತಿರುವುದನ್ನು ಸಂಚಾರಿ ಪೋಲಿಸರು ಪತ್ತೆ ಹಚ್ಚಿದ್ದರು.
ಎಲ್ಲ ಆಟೋಗಳನ್ನು ಪರಿಶೀಲಿಸಿದ ಸಂಚಾರಿ ಠಾಣೆಯ ಪೋಲಿಸರು ಎಲ್ಲ ದಾಖಲಾತಿಗಳನ್ನೂ ಸಹ ಪರಿಶೀಲಿಸಿದರು. ನಿಗದಿತ ಸಂಖ್ಯೆಯಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಸಾಗಿಸಬೇಕು. ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಾಗಿಸಿದರೆ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಚಾರಿ ಠಾಣೆಯ ಪೋಲಿಸರು ಎಚ್ಚರಿಸಿದರು.