ಆಟೋದಲ್ಲಿ ಗಾಂಜಾ ಮಾರಾಟ ಚಾಲಕ ಸೇರಿ ಇಬ್ಬರು ಸೆರೆ

ಬೆಂಗಳೂರು, ಮಾ.೨೫-ಆಟೋದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು ೪೫.೧ ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶ್ರೀರಾಮಪುರದ ಸತೀಶ್ ಅಲಿಯಾಸ್ ಕೋಳಿಬಾಡಿ( ೨೮) ವಸಂತ (೨೪)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿಗಳಿಂದ ೪೫.೧ ಕೆ.ಜಿ. ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ೧-ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಮಾ.೨೧ ರಂದು ಸಂಜೆ ೫ ರ ವೇಳೆ ಗಂಟೆ ಸಮಯದಲ್ಲಿ ಶ್ರೀರಾಮಪುರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಮತ್ತವರ ಸಿಬ್ಬಂದಿ ಗಸ್ತಿನಲ್ಲಿರುವಾಗ ವಾಟಾಳ್ ನಾಗರಾಜ್ ರಸ್ತೆಯ ಆರ್.ಆರ್. ಕಲ್ಯಾಣ ಮಂಟಪ ಹತ್ತಿರ ರಸ್ತೆ ಮಾರ್ಗವಾಗಿ ಆರೋಪಿಗಳು ಆಟೋದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಆಧರಿಸಿ ಬಂಧಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಸತೀಶ್ ಸ್ವಂತ ಆಟೋ ಇಟ್ಟುಕೊಂಡು ಚಾಲಕನಾಗಿದ್ದು ಶ್ರೀರಾಮಪುರ ಪೊಲೀಸ್ ಠಾಣೆಯ ಹಳೆ ಆರೋಪಿಯಾಗಿರುವ ಈತನ ವಿರುದ್ಧ ೨೦೧೮ ರಲ್ಲಿ ಗಾಂಜಾ ಪ್ರಕರಣ ಮತ್ತು ೨೦೨೦ ನೇ ಸಾಲಿನಲ್ಲಿ ೧-ಸುಲಿಗೆ, ನಂದಿನಿಲೇಔಟ್ ೨೦೧೯ನೇ ಸಾಲಿನಲ್ಲಿ ೧ -ಗಾಂಜಾ ಪ್ರಕರಣ, ಹಾಗೂ ೨೦೧೬ ನೇ ಸಾಲಿನಲ್ಲಿ ೧-ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳು ಹಾಲಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ.
ಆರೋಪಿಯು ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂನ, ತುಣಿ ತಾಲ್ಲೂಕಿನ, ಚಿಂತಪಲ್ಲಿ ಜಂಕ್ಷನ್‌ನಲ್ಲಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ಆತನೊಂದಿಗೆ ಮಾತನಾಡಿ ಮುಂಚಿತವಾಗಿ ಹಣವನ್ನು ನೀಡಿ ಬಂದಿದ್ದು, ಆತನು ರೈಲಿನ ಮೂಲಕ ವ್ಯಕ್ತಿಯೊಬ್ಬರ ಕೈಯಲ್ಲಿ ಬೆಂಗಳೂರಿಗೆ ಗಾಂಜಾವನ್ನು ಲಗೇಜ್ ರೀತಿ ಪ್ಯಾಕ್ ಮಾಡಿ ಕಳುಹಿಸಿದ್ದನ್ನು ಆರೋಪಿ ತನ್ನ ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಬಂದು ಚಿಕ್ಕ ಚಿಕ್ಕ ಪೊಟ್ಟಣ ಮಾಡಿ ೨೫೦ ರಿಂದ ೩೦೦ ರೂ.ಗೆ ಮಾರಾಟ ಮಾಡುತ್ತಿದ್ದಾಗಿ ಹಾಗೂ ಉತ್ತಮ ಗುಣ್ಣಮಟ್ಟದ ಗಾಂಜಾವನ್ನು ಮ್ಯಾಂಗೋ ಎಂಬ ಕೋಡಿಂಗ್ ನೀಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.
ಎಂದರು.