ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಗಿವೆ ಸಂಚಾರಿ ದೀಪಗಳು

ದಾವಣಗೆರೆ.ಜೂ.೨: ಸಂಚಾರದ ಒತ್ತಡ ನಿಯಂತ್ರಿಸಲು ದಾವಣಗೆರೆ ಮಹಾನಗರದಲ್ಲಿ ಅಳವಡಿಸಲಾಗಿರುವ ಸಂಚಾರಿ ದೀಪಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಗಿದೆ.ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದ ಬಹುತೇಕ ವೃತ್ತಗಳಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆಗೆಂದೇ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ವಾಹನ ಸವಾರರು ಸಂಚಾರಿ ದೀಪಗಳನ್ನು ನೋಡದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡುತ್ತಾ ಸಂಚಾರಿ ಒತ್ತಡವನ್ನು ನಿರ್ಮಿಸಿದ್ದಾರೆ.ನಗರದ ಬಹುತೇಕ ವೃತ್ತಗಳಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಸಂಚಾರಿ ದೀಪಗಳನ್ನು ಅಳವಡಿಸಲಾಗಿದ್ದರೂ ಬಹುತೇಕ ವಾಹನ ಸವಾರರು ಅವುಗಳನ್ನು ಪಾಲನೆ ಮಾಡುತ್ತಿಲ್ಲ. ಬೇಕಾಬಿಟ್ಟಿ ಓಡಾಡುವುದರಿಂದ ಇತರೆ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.ಇಷ್ಟೇ ಅಲ್ಲದೇ ಸಾರ್ವಜನಿಕರು ಸಹ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ಎಲ್ಲಿಂದರಲ್ಲಿ ಓಡಾಡುತ್ತಾರೆ. ಸಿಗ್ನಲ್ ದೀಪ ಸೂಚನೆ ಬರುವವರೆಗೂ ಯಾರು ಕಾಯುವುದಿಲ್ಲ. ನಿಗದಿತ ಅವಧಿಗಿಂತ ಮುಂಚೆಯೇ ವಾಹನಗಳು ವೇಗವಾಗಿ ಓಡಾಡುತ್ತವೆ. ಇದರಿಂದಾಗಿ ಸಾರ್ವಜನಿಕರಿಗೆ ಆತಂಕ ಎದುರಾಗುತ್ತದೆ.ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಈ ರೀತಿ ನಗರದ ವೃತ್ತಗಳಲ್ಲಿ ಅಳವಡಿಸಲಾಗಿರುವ ಸಂಚಾರಿ ನಿಯಮ ಪಾಲನೆ ಆಗುತ್ತಿಲ್ಲ ಈ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಈ ಮೊದಲು ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸರು ಇರುತ್ತಿದ್ದರು. ಆಗ ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ, ಸ್ಥಳದಲ್ಲೇ ದಂಡ ಹಾಕುತ್ತಿದ್ದರು. ಇಲ್ಲವೇ ನ್ಯಾಯಾಲಯಕ್ಕೆ ಹೋಗಿ ದಂಡ ಪಾವತಿ ಮಾಡುವಂತೆ ಸೂಚನೆ ನೀಡುತ್ತಿದ್ದರು.ಆದರೆ ಈಗ ಯಾವುದೇ ವೃತ್ತಗಳಲ್ಲಿ ಸಂಚಾರಿ ಪೊಲೀಸರು ಕಾಣಸಿಗುವುದಿಲ್ಲ. ಇದರಿಂದಾಗಿ ಸಾರ್ವಜನಿಕರು, ವಾಹನ ಸಂಚಾರರು ಬೇಕಾಬಿಟ್ಟಿ ಓಡಾಡುತ್ತಾ ಎಲ್ಲೆಂದರಲ್ಲಿ ಅಡ್ಡಾಡುತ್ತಾ ತೊಂದರೆ ಕೊಡುತ್ತಿದ್ದಾರೆ.ಅಡ್ಡಾದಿಡ್ಡಿ ಓಡಾಡುವ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಯಾರಾದರೂ ಈ ರೀತಿ ಮಾಡಬಾರದು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತದೆಂದರೆ ನಿಮ್ಮ ಪಾಡಿಗೆ ನೀವು ಹೋಗಿ ನಿಮ್ಮ ಕೆಲಸವನ್ನು ನೋಡಿಕೊಳ್ಳಿ ನಮ್ಮ ತಂಟೆಗೆ ಬರಬೇಡಿ ಎಂದು ವಾಗ್ವಾದಕ್ಕೆ ಇಳಿಯುತ್ತಾರೆ.ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಎಲ್ಲಾ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಬೇಕು. ಅಲ್ಲದೇ ಒಂದು ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು, ಸಾರ್ವಜನಿಕರಿಗೆ ತಕ್ಷಣವೇ ದಂಡ ಅಥವಾ ಶಿಕ್ಷೆ ವಿಧಿಸಿದರೆ ಎಚ್ಚೆತ್ತುಕೊಂಡು ಇನ್ನಾದರೂ ಸಂಚಾರ ನಿಯಮಗಳನ್ನು ಪಾಲಿಸೋಣ ಎನ್ನುವ ಹಂತಕ್ಕೆ ಬರಲಿದ್ದಾರೆ ಎನ್ನುವುದೇ ಸಾರ್ವಜನಿಕರ ಅಭಿಪ್ರಾಯ.