ಆಜಾದ್ ಕಾಶ್ಮೀರ್ ಪ್ರಶ್ನೆ ತನಿಖೆಗೆ ಮಮತಾ ಆದೇಶ

ನವದೆಹಲಿ,ಜ.೧೮- ಪಶ್ವಿಮ ಬಂಗಾಳದ ೨೦೨೨-೨೦೨೩ರ ಸಾಲಿನ ಪ್ರೌಢ ಶಿಕ್ಷಣ ಮಂಡಳಿಯ ೧೦ನೇ ತರಗತಿ ಪರೀಕ್ಷೆಯ ಪರೀಕ್ಷಾ ಪತ್ರಿಕೆಯಲ್ಲಿ ಭಾರತದ ಭೂಪಟದಲ್ಲಿ ‘ಆಜಾದ್ ಕಾಶ್ಮೀರ್’ ಎಂದು ಗುರುತಿಸಲು ವಿದ್ಯಾರ್ಥಿಗಳಿಗೆ ಕೇಳಿದ್ದ ಪ್ರಶ್ನೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ವಿವಾದ ರಾಡಿಯಾಗುತ್ತಿದ್ದಂತೆ ಕೇಂದ್ರ ಶಿಕ್ಷಣ ಸಚಿವಾಲಯ ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ತನಿಖೆ ನಡೆಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶ್ವಿಮ ಬಂಗಾಳದ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ.
ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳು ಭರವಸೆಯನ್ನೂ ಪಶ್ವಿಮ ಬಂಗಾಳ ಶಿಕ್ಷಣ ಸಚಿವರು ನೀಡಿದ್ಧಾರೆ.
ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದಾಗಲಿ ಅಥವಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಪದೇ ಪದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ಥಾಪಿಸುವ ಮೂಲಕ ಭಾರತಕ್ಕೆ ಮುಜುಗರ ಉಂಟು ಮಾಡುತ್ತಿರುವ ನಡುವೆಯೇ ಪಶ್ವಿಮ ಬಂಗಾಳದ ಎಸ್ ಎಸ್ ಎಲ್ ಸಿ ಪರೀಕ್ಷಯಲ್ಲಿ ಆಜಾದ್ ಕಾಶ್ಮೀರ್ ಗುರುತಿಸಿ ಎನ್ನುವ ವಿಷಯ ಬಾರಿ ಸದ್ದು ಮಾಡಿದೆ.