ಆಜಾಂ ಮಸೀದಿಗೆ ಬಾಂಬ್ ಕರೆ ಖದೀಮನ ಸೆರೆ

ಬೆಂಗಳೂರು,ಜು.೧೦- ಶಿವಾಜಿನಗರದ ಪ್ರತಿಷ್ಠಿತ ಆಜಾಂ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿ ಹುಸಿ ಕರೆ ಮಾಡಿದ್ದ ಪದವೀಧರ ಖದೀಮನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜು.೬ ರಂದು ರಾತ್ರಿ ಆಜಾಂ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿ ಆರೋಪಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು.
ತಪಾಸಣೆ ಮಾಡಿದಾಗ ಯಾವುದೇ ಅಪಾಯಕಾರಿ ವಸ್ತುಗಳು ಪೊಲೀಸರು ನಿಟ್ಟುಸಿರು ಬಿಟ್ಟಿದ್ದರು. ಹುಸಿ ಬಾಂಬ್ ಕರೆ ಮಾಡಿದವನ ಜಾಡು ಹಿಡಿದ ಶಿವಾಜಿನಗರ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
ಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ (೩೭) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಆರೋಪಿ ಸೈಯದ್ ಮಹಾರಾಷ್ಟ್ರ ರಾಜ್ಯದವನಾಗಿದ್ದು, ಮದರಸಾ ಹೆಸರಿನಲ್ಲಿ ಮಸೀದಿಗಳಲ್ಲಿ ಚೆಂದಾ ಕೇಳುತ್ತಿದ್ದ.
ಕಳೆದ ಜು. ೪ ರಂದು ನಗರಕ್ಕೆ ಬಂದು, ಬಳಿಕ ೫ ರಂದು ತೆಲಂಗಾಣಕ್ಕೆ ಹೊರಟಿದ್ದ. ದೇವನಹಳ್ಳಿ ದಾಟುತಿದ್ದಂತೆ ಮೊಬೈಲ್ ಮೂಲಕ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಇಡುತ್ತಿದ್ದಾರೆ ಎಂದೇಳಿ ಕಾಲ್ ಕಟ್ ಮಾಡಿದ್ದ.
ಬಳಿಕ ಕರ್ನೂಲ್‌ನಿಂದ ಮಹಬೂಬ್ ನಗರಕ್ಕೆ ತೆರಳಿ ಪರಾರಿಯಾಗಿದ್ದು,ನಗರ ಪೊಲೀಸರಿಗೆ ಒಮ್ಮಿಂದೊಮ್ಮೆಗೇ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಹುಸಿ ಬಾಂಬ್ ಬೆದರಿಕೆ ಇದು ಎಂದು ಸುಮ್ಮನಾಗದೇ ಆರೋಪಿಯ ಹಿಂದೆ ಬಿದ್ದು, ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
ಕರೆಗೆ ಅಸಲಿ ಕಾರಣ:
ಸೈಯದ್‌ಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳೆದ ೪ರಂದು ಶಿವಾಜಿನಗರ ಆಜಾಂ ಮಸೀದಿಗೆ ಬಂದಿದ್ದ ಆರೋಪಿಯು. ಚಂದಾ ಕೇಳಿ ರಾತ್ರಿ ಉಳಿದು ಕೊಳ್ಳಲು ಮುಂದಾಗಿದ್ದ. ಆದರೆ ಅಲ್ಲಿನ ಸಿಬ್ಬಂದಿ ಯಾರಿಗೂ ಇಲ್ಲಿ ಉಳಿದುಕೊಳ್ಳುವ ಅವಕಾಶ ಇಲ್ಲ ಎಂದೇಳಿ ಮಸೀದಿಯಿಂದ ಹೊರಗೆ ಕಳುಹಿಸಿದ್ದರು.
ಇದೇ ಬೇಸರದಲ್ಲಿ ಅಲ್ಲಿಂದ ರಾತ್ರಿ ೯.೩೦ಕ್ಕೆ ಮೆಜೆಸ್ಟಿಕ್ ಬಂದಿದ್ದ. ಮೆಜೆಸ್ಟಿಕ್‌ನಿಂದ ಕರ್ನೂಲ್ ಬಸ್ ಹತ್ತಿದ್ದ ಸೈಯದ್ ದೇವನಹಳ್ಳಿ ದಾಟುತಿದ್ದಂತೆ ಪೊಲೀಸ್ ಕಂಟ್ರೋಲ್ ನಂಬರ್ ೧೦೦ಕ್ಕೆ ಕರೆ ಮಾಡಿದ್ದ.
ಬಿಎಸ್ಸಿ ಪದವೀಧರ:
ಅದು ಆಟೋ ಫಾರ್ವರ್ಡ್ ಮುಖಾಂತರ ೧೧೨ಗೆ ಕನೆಕ್ಟ್ ಆಗಿತ್ತು. ಈ ವೇಳೆ ಹುಸಿ ಬಾಂಬ್ ಕಥೆ ಬಿಟ್ಟು ಹೋಗಿದ್ದ.
ಮಸೀದಿಯಲ್ಲಿ ಮಲಗಲು ಬಿಟ್ಟಿಲ್ಲ ಎಂದು ಸಿಬ್ಬಂದಿ ಮೇಲಿನ ಕೋಪಕ್ಕೆ ಈ ರೀತಿಯ ಕುಚೇಷ್ಟೆ ಮಾಡಿದ್ದಾನೆ. ಈತನ ಕೃತ್ಯದಿಂದ ರಾತ್ರಿಯಿಡಿ ಹುಡುಕಾಡಿ ಪೊಲೀಸರು ಸುಸ್ತಾಗಿದ್ದರು. ಅಸಲಿಗೆ ಸೈಯದ್ ಬಿಎಸ್ಸಿ ಮುಗಿಸಿದ್ದು, ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ದಿನಕ್ಕೊಂದು ರಾಜ್ಯ, ಕಂಡ ಕಂಡ ಊರು ಸುತ್ತುವ ಸೈಯದ್, ಮಸೀದಿಗಳ ಬಳಿ ಚಂದಾ ಎತ್ತಿ ಜೀವನ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.