
ರಾಯಚೂರು ಆ.೩೧- ಇಂದು ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಜಂಗಮ ವಟುಗಳಿಗೆ ಇಷ್ಠಲಿಂಗ ಧೀಕ್ಷೆ ಅಯ್ಯಾಚಾರ ಮತ್ತು ಶಿವಧೀಕ್ಷಾ ಕಾರ್ಯಕ್ರಮವನ್ನು ಶ್ರೀಮಠದ ಷ.ಬ್ರ.ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಒಟ್ಟು ಹತ್ತು ಜನ ಜಂಗಮ ವಟುಗಳು ಹಾಗೂ ಐದು ಜನ ಜಂಗಮ ಬಂಧುಗಳು ಇಷ್ಠಲಿಂಗಧೀಕ್ಷೆ, ಶಿವಧೀಕ್ಷೆಯಲ್ಲಿ ಭಾಗವಹಿಸಿದ್ದರು.
ಶಿವಯ್ಯ ಶಾಸ್ತ್ರಿಯವರ ತಂಡದವರು ಪೌರೋಹಿತ್ಯವನ್ನು ನಡೆಸಿ ಜಂಗಮ ವಟುಗಳಿಗೆ ಶಿರದ ಮೇಲೆ ಕ್ಷೀರಾಭಿಷೇಕ, ಜಲಾಭಿಷೇಕ, ಭಸ್ಮ, ಗಂಧ, ಕುಂಕುಮ ಹಾಗೂ ಬಿಲ್ವಪತ್ರಿ ಧಾರಣೆ ಮಾಡಿ ಮಾಂಸ ಪಿಂಡದ ಜಂಗಮರನ್ನು ಮಂತ್ರ ಪಠಣದ ಮೂಲಕ ಮಂತ್ರಪಿಂಡವಾಗಿಸಿದರು.
ನಂತರ ಶ್ರೀಗಳು ಕೊರಳಲ್ಲಿ ಇಷ್ಠಲಿಂಗವನ್ನು ಧಾರಣೆಮಾಡಿ ಪಂಚಾಕ್ಷರಿ ಮಂತ್ರವನ್ನು ಅವರ ಕಿವಿಯೊಳಗೆ ಭೋಧಿಸಿ ನಿತ್ಯವೂ ತಪ್ಪದೇ ನಿಮ್ಮ ಮನೆಯಲ್ಲಿ ಇಷ್ಠಲಿಂಗ ಪೂಜೆಯನ್ನು ಮಾಡಿಕೊಳ್ಳುವ ಆಚರಣೆ ಮಾಡಿ ಎಂದು ಭೋಧಿಸಿದರು.
ನಂತರ ಧರ್ಮ ಸಂದೇಶ ನೀಡಿದ ಶ್ರೀಗಳು ಮಾನವ ಧರ್ಮದಲ್ಲಿ ಜಂಗಮರಾಗಿ ಜನಿಸಿದ ನಾವು ಇಷ್ಠಲಿಂಗದ ಧೀಕ್ಷೆ ಪಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ನಿತ್ಯವೂ ಒಂದು ಹತ್ತು ನಿಮಿಷ ಇಷ್ಣಲಿಂಗದ ಪೂಜೆಯ ಆಚರಣೆಯಿಂದ ನಮ್ಮ ಮನಸ್ಸಿಗೂ ಆರೋಗ್ಯ ನೆಮ್ಮಧಿ ಹಾಗೂ ನಮ್ಮ ಧರ್ಮವನ್ನು ರಕ್ಷಣೆ ಮಾಡಿದ ಪುಣ್ಯ ನಮಗೆ ಲಭಿಸುತ್ತದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರು, ಶ್ರೀಮಠದ ಶಿಷ್ಯ ವೃಂಧದವರು,ಜಂಗಮ ವಟುಗಳ ಪಾಲಕರು ಉಪಸ್ಥಿತರಿದ್ದರು.