ಆಚಾರ ವಿಚಾರ ನೀತಿ ನುಡಿದಂತೆ ನಡೆದವರು ರಚಿಸಿದ ವಚನಗಳೇ ವಚನಗಳು ಉಳಿದವೆಲ್ಲ ಮಿಥ್ಯಾ: ವಿಜಯಲಕ್ಷ್ಮಿ ಗಡ್ಡೆ

ಭಾಲ್ಕಿ :ಮಾ.17: 61ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ಸುರೇಖಾ ಬಸವರಾಜ ಬೇಲೂರೆ ಸಾಯಗಾವ ಅಷ್ಟುರೆ ಕಲ್ಯಾಣ ಮಂಟಪ ಎದುರಿಗೆ ಗಂಜ್ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ವಹಿಸಿದ್ದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಮಾರ್ಗದರ್ಶನದಲ್ಲಿ, ಪೂಜ್ಯ ಶ್ರೀ ಮಹಾಲಿಂಗ ದೇವರು ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು. ವೇದಿಕೆಯ ಮೇಲೆ ಮಲ್ಲಮ್ಮ ನಾಗನಕೆರೆ ಶಂಭುಲಿಂಗ ಕಾಮಣ್ಣ ಉಪಸ್ಥಿತರಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಗಡ್ಡೆ ಬಸವಕಲ್ಯಾಣ ಭಾಲ್ಕಿ ಅವರು 12 ನೇ ಶತಮಾನದ ಶಿವಶರಣೆಯರು ಎನ್ನುವ ವಿಷಯದ ಕುರಿತು ಅನುಭಾವ ನುಡಿದರು. 12ನೆಯ ಶತಮಾನದ ಶಿವಶರಣೆಯರ ವಚನಗಳು ತುಂಬಾ ಅರ್ಥಗರ್ಭಿತ ವಾದವುಗಳು. ಅವರು ರಚಿಸಿದ ಒಂದೊಂದು ವಚನಗಳ ಮೇಲೆ ಅನೇಕ ಕನ್ನಡ ಪ್ರಾಧ್ಯಾಪಕರು ಪೀ.ಹೆಚ್.ಡಿ. ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆಯಬಹುದು ಅಂತಹ ವಚನಗಳನ್ನು ನಮ್ಮ ಶರಣೆ ತಾಯಂದಿರು ನಮಗೆ ನೀಡಿದ್ದಾರೆ. ಹೇಗೆ ಅಕ್ಕಮಹಾದೇವಿ ತಮ್ಮ ವಚನದಲ್ಲಿ ಹೇಳಿದಂತೆ, ಹಾದಿಯಲ್ಲಿ ಬೀದಿಯಲ್ಲಿ ಹೊನ್ನು ವಸ್ತ್ರಗಳು ಬಿದ್ದರೆ ಅದನ್ನು ನನ್ನ ಕಣ್ಣು ಮುಚ್ಚಿ ನನ್ನ. ಮನಸ್ಸು ಹಾಕಿ ಅದನ್ನು ಎತ್ತಿದ್ದೆ ಆದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎಂದು ಹೇಳುವುದರ ಮೂಲಕ ಅವರು ಸಮಾಜದಲ್ಲಿ ಬದುಕಿದ ರೀತಿಯ ಬಗ್ಗೆ ಹೇಳಿದ್ದಾರೆ. ಶರಣರು ನಮಗೆ ನೀಡಿದ್ದು ವಿಭೂತಿ ರುದ್ರಾಕ್ಷಿ ಮಂತ್ರ ಹಾಗೂ ಪಾದೋದಕ. ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕ. ಗುರು ಪಾದೋದಕವೇ ಕರುಣಾ ಜಲ.
ನಮ್ಮ ಮನ ನೀರಿನ ಮೇಲೆ ಎಳೆದ ಗೆರೆಯಂತೆ ಇರಬೇಕು. ಯಾರೇ ತಪ್ಪು ಮಾಡಿದರೂ ಅವರನ್ನು ಕ್ಷಮಿಸಿ ಮುನ್ನಡೆಯಬೇಕು ಅದುವೇ ಕರುಣೆ. ಹೇಗೆ ಒಬ್ಬ ಗುರು ತನ್ನ ಶಿಷ್ಯ ಏನೇ ತಪ್ಪು ಮಾಡಿದರೂ ಕ್ಷಮಿಸುವನೋ ಅಂತಹ ಗುಣವಿರಬೇಕು. ಹರ ಮುನಿದರೆ ಗುರು ಕಾಯುವ ಎಂದರು. ಲಿಂಗ ಪಾದೋದಕವೆ ವಿನಯ ಜಲ ಎಲ್ಲರನ್ನೂ ಒಂದೇ ಸಮನಾಗಿ ಕಂಡು ಬಂದವರನ್ನು ವಿನಯದಿಂದ ಬನ್ನಿ ಶರಣು ಶರಣಾರ್ಥಿ ಎನ್ನುವುದು ಕುಡಿಯಲು ನೀರು ಕೇಳುವುದು, ಕುಳಿತುಕೊಳ್ಳಲು ಜಾಗ ನೀಡುವುದು ಇದುವೇ ಲಿಂಗ ಪಾದೋದಕ ಎಂದು ಹೇಳಿದರು. ಆಚಾರ ವಿಚಾರ ನೀತಿ ನುಡಿದಂತೆ ನಡೆದ ವಚನಗಳೇ ಬಸವಾದಿ ಶರಣರು ಬರೆದ ವಚನಗಳೇ ವಚನಗಳು. ಇಂದಿನ ಆಧುನಿಕ ಲೇಖಕರು ಸಾಹಿತಿಗಳು ಬರೆದ ವಚನಗಳು ವಚನಗಳಲ್ಲ ಅವುಗಳನ್ನು ವಚಂಗಳೆಂದು ಬರೆಯಬಾರದು. ದಯವಿಟ್ಟು ಅವುಗಳನ್ನು ಕವನ, ಕವಿತೆ ಎಂದು ಬರೆಯಬೇಕು. ಯಾರೂ ಆಚಾರವಿಲ್ಲದವರು ಬರೆದ ವಚನಗಳನ್ನು ವಚನ ಎಂದು ಕರೆಯಬಾರದು ಅವುಗಳನ್ನು ಹಾಡು ಎಂದು ಕರೆಯುವುದು ಉತ್ತಮ ಎಂದು ತಮ್ಮ ದುಃಖವನ್ನು ತೋಡಿಕೊಂಡರು.
ಬಸವ ಗುರುಪೂಜೆ ಸುರೇಖಾ ಬಸವರಾಜ ಬೇಲೂರೆ ನೆರವೇರಿಸಿದರು.ಬಸವ ಪ್ರಾರ್ಥನೆಯನ್ನು ಗಂಗಾಂಬಿಕಾ ಸತೀಶ ಆಸ್ಟುರೆ ಭಾಲ್ಕಿ ನಡೆಸಿಕೊಟ್ಟರು. ಪಾರ್ವತಿ ಜಗನ್ನಾಥ ಧುಮ್ಮನಸುರೇ ಭಾಲ್ಕಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅನೇಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಸವರಾಜ್ ಮರೆ, ಜಯಪ್ರಕಾಶ ಕುಂಬಾರ, ರಾಮಚಂದ್ರ ಯಾರ್ನಾಳೆ, ಸಂದೀಪ ಬೇಲೂರೆ, ಶಾಂತಾ ಬೇಲೂರೆ, ದೈವಶಾಲಾ, ರಾಜಶ್ರೀ ಶಿಕ್ಷಕಿ, ಕಾಶಿಬಾಯಿ, ಪ್ರಭಾವತಿ ಮರೆ, ಸಾವಿತ್ರಿ ಗುಂಗೆ, ಇಂದುಮತಿ ಮಾನಕಾರ್, ಶರಣಪ್ಪ ರುಮ್ಮಾ, ಎಂ.ವಿ. ಗಿರೀಶ್ ಉಪಸ್ಥಿತರಿದ್ದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.