ಆಚರಣೆಗಳೊಂದಿಗೆ ಪರಿಸರ ಉಳಿಸುವ ಸಂಕಲ್ಪ ನಮ್ಮದಾಗಬೇಕು

ಹುಬ್ಬಳ್ಳಿ, ಆ1: ಅಧಿಕಮಾಸದ ಅಂಗವಾಗಿ ನಗರದ ಅರವಿಂದ ನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ದೇವಿಯವರಿಗೆ ಮಹಾಭಿಷೇಕ, ವಿಶೇಷ ಅಲಂಕಾರದೊಂದಿಗೆ ಉದಯಪೂಜೆ ಜರುಗಿತು. ನಂತರ ಗೋಮಾತೆಯನ್ನು ಬರಮಾಡಿಕೊಂಡು ಪ.ಪೂ.ಮಾತೋಶ್ರೀ ಅಮ್ಮನವರು ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ಮುತ್ತೈದೆಯರು ಆರತಿ ಗೈದರು. ಶ್ರೀ ಲಕ್ಷ್ಮೀದೇವಿ ಸಹಿತ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯನ್ನು ನೆರವೇರಿಸಲಾಯಿತು. 33 ಜನ ಮುತ್ತೈದೆಯರಿಗೆ ಅಧಿಕಮಾಸದ ಬಾಗಿನವನ್ನು ನೀಡಲಾಯಿತು.

             ವೃಕ್ಷಮಾತೆ, ಪದ್ಮಶ್ರೀ, ನಾಡೋಜ, ಡಾ: ಸಾಲುಮರದ ತಿಮ್ಮಕ್ಕ ಅಜ್ಜಿಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹು-ಧಾ ಮಹಾನಗರದ  ಮಹಾಪೌರರಾದ ಶ್ರೀಮತಿ ವೀಣಾ ಭರದ್ವಾಡ ರವರು ಮಾತನಾಡಿ ಎಲ್ಲೆಡೆ  ಈ ರೀತಿಯಾಗಿ ಪೂಜೆ-ಪುನಸ್ಕಾರಗಳು ಜರುಗಬೇಕು ಅಂದಾಗ ಅದರ ಮಹತ್ವ ನಮ್ಮೆಲ್ಲರಿಗೂ ತಿಳಿಯುತ್ತದೆ ಎಂದರು. 

ಮತ್ತೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ರವರು ಮಾತನಾಡಿ ಹಬ್ಬಗಳು ಹಾಗೂ ಆಚರಣೆಗಳು ನಮ್ಮಲ್ಲಿ ಏಕತೆಯನ್ನು ಉಂಟು ಮಾಡುತ್ತವೆ. ಅದರಲ್ಲೂ ಎಲ್ಲಾ ಹಬ್ಬ ಹರಿದಿನಗಳು ಹೆಣ್ಣುಮಕ್ಕಳಿಗೆ ವಿಶೇಷ. ಈ ಆಚರಣೆಗಳ ಜೊತೆಗೆ ಪರಿಸರ ಮತ್ತು ಪ್ರಕೃತಿಯನ್ನು ಉಳಿಸುವ ಸಂಕಲ್ಪ ನಮ್ಮೆಲ್ಲರದಾಗಬೇಕು. ನಾನು ಪ್ರತಿ ಮನೆಗೂ ಸಸಿಗಳನ್ನು ಒದಗಿಸುವ ಪ್ರತಿಜ್ಞೆ ಮಾಡುತ್ತೇನೆ ಅವುಗಳನ್ನು ಬೆಳೆಸಿ ಪೋಶಿಸುವ ಕೆಲಸ ನಮ್ಮದಾಗಲಿ ಎಂದರು.
ಸಾಹಿತಿ ಅರವಿಂದ ಯಾಳಗಿ ಮಾತನಾಡಿ ಸ್ತ್ರೀಯರನ್ನು ಆಧರಿಸಿ ಗೌರವಿಸುವ ದೇವಸ್ಥಾನದ ಕೆಲಸವನ್ನು ಶ್ಲಾಘಿಸುತ್ತ ಪ್ರತಿ ಆಚರಣೆಗಳು ನಮ್ಮ ಹೆಣ್ಣುಮಕ್ಕಳ ಮೂಲಕ ತಲುಪಬೇಕು ಎಂದರು. ಡಾ: ಸಾಲುಮರದ ತಿಮ್ಮಕ್ಕ ಅಜ್ಜಿಯವರ ಪರವಾಗಿ ಅವರ ಸುಪುತ್ರ ಉಮೇಶ ಮಾತನಾಡಿ ನಾವೆಲ್ಲರೂ ಧರ್ಮವನ್ನು ರಕ್ಷಿಸುವ ಕೆಲಸ ಮಾಡಬೇಕು. ಅಂದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಮತ್ತು ತಿಮ್ಮಕ್ಕನವರ ನಿಸ್ವಾರ್ಥ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ ಎಂದರು.
ಕೊನೆಗೆ ಆರ್ಶೀವಚನ ನೀಡಿದ ಪ.ಪೂ.ಮಾತೋಶ್ರೀ ಅಮ್ಮನವರು ಎಲ್ಲಾ ಭಕ್ತರಿಗೆ ಆ ಜಗನ್ಮಾತೆ ಹುಲಿಗೆಮ್ಮಾದೇವಿಯು ಒಳಿತನ್ನು ಮಾಡಲಿ ಎಂದು ಹಾರೈಸುತ್ತ ದೇವಸ್ಥಾನದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಮುಂದಿನ ಕಾರ್ಯ ಚಟುವಟಿಕಗಳಿಗಾಗಿ ಸದರಿ ದೇವಸ್ಥಾನಕ್ಕೆ ಸರ್ಕಾರದ ವತಿಯಿಂದ ಭೂಮಿಯನ್ನು ವಿತರಿಸುವಂತೆ ಶಾಸಕರಿಗೆ ಮತ್ತು ಪರಿಸರ ರಾಯಭಾರಿ ಡಾ: ಸಾಲುಮರದ ತಿಮ್ಮಕ್ಕ ಅಜ್ಜಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ವೇದಿಕೆಯ ಮೇಲೆ ಶ್ರೀಮತಿ. ಲಲಿತಾ ವಿಜಯ ಸಂಕೇಶ್ವರ, ಹುಬ್ಬಳ್ಳಿಯ ವಕೀಲರ ಸಂಘದ ಅಧ್ಯಕ್ಷರಾದ ಎಮ್.ಎಸ್.ಬಾಣದ, ನ್ಯಾಯವಾದಿ ಆಶಾ ನಟರಾಜ್, ಮಾಜಿ ಯೋಧ ಶಿವಾಜಿ ಗಾಂವಕರ, ಸಾಹಿತಿಗಳಾದ ಲಿಂಗರಾಜ ಅಂಗಡಿ, ಅರವಿಂದ ಯಾಳಗಿ, ಬಸವರಾಜ ಬನ್ನಿಕೊಪ್ಪ, ಮಲ್ಲಯ್ಯ ಗಾಯಕವಾಡ, ಬಿಜೆಪಿ ಮುಖಂಡ ತೋಟಪ್ಪ ನಿಡಗುಂದಿ, ಕಾಂಗ್ರೇಸ್ ಮುಖಂಡ ಮಹೇಶ ದಾಬಡೆ, ಅಶೋಕ ವಾಲ್ಮೀಕಿ, ಹೇಮಂತ ಕರ್ಜಗಿ, ವಿನೋದ ರೇವಣಕರ, ನಾಗರಾಜ ಮಾಸಣಗಿ, ವಿರುಪಾಕ್ಷಿ ಚಲವಾದಿ, ಪ್ರಕಾಶ ಅರಗಂಜಿ, ಪರಶುರಾಮ ಮ್ಯಾಗೇರಿ, ನಾರಾಯಣ ನಿಡಗುಂದಿ, ಅರುಣಕುಮಾರ ಹೆಬ್ಬಳ್ಳಿ, ಸುಭಾಷ ಕಂಬಾರ, ರಾಮಣ್ಣ ಕಂಬಾರ, ಪರಶುರಾಮ ಸುಳ್ಳದ, ಶರದ್ ನಿಡಗುಂದಿ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಅನುಸೂಯಾ ಚೌಗಲೆ, ಸುಮಿತ್ರಾ ಅಂಗಡಕಿ, ನ್ಯಾಯವಾದಿಗಳಾದ ಅನಿತಾ ಬಾಣದ, ಅನುಪಮಾ ಅಕ್ಕೂರ, ಶಾರದಾ ಪಾನಘಂಟಿ, ಗೀತಾ ಪ್ರಧಾನಿ, ಪದ್ಮಾ ದಿವಟೆ, ಪುಷ್ಪಾ ಎಕಬೋಟೆ ಸೇರಿದಂತೆ ನೂರಾರು ಜನರು ಸದ್ಭಕ್ತರು ಉಪಸ್ಥಿತರಿದ್ದರು.