ಆಗ್ನೇಯ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ

ಬೆಂಗಳೂರು, ನ. ವಿಧಾನಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದು, ವಿಧಾನಪರಿಷತ್‌ನ ನಾಲ್ಕೂ ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದಂತಾಗಿದೆ.
ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ, ಈಶಾನ್ಯ ಶಿಕ್ಷಕರ, ಪಶ್ಚಿಮಪದವೀಧರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳಿಗೆ ಕಳೆದ ಅಕ್ಟೋಬರ್ ೨೮ ರಂದು ಚುನಾವಣೆ ನಡೆದಿತ್ತು. ನಿನ್ನೆ ಈ ನಾಲ್ಕೂ ಕ್ಷೇತ್ರಗಳ ಮತ ಎ ಣಿಕೆ ನಡೆದಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಪುಟ್ಟಣ್ಣ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಶಶಿಲ್ ಜಿ. ನಮೋಶಿ, ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ. ಸಂಕನೂರ ವಿಜಯಶಾಲಿಗಳಾಗಿದ್ದರು. ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ತಡವಾಗಿ ಇಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿ ಬಿಜೆಪಿಯ ಅಭ್ಯರ್ಥಿ ಚಿದಾನಂದಗೌಡ ಅವರು ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಅವರನ್ನು ಸೋಲಿಸಿ ಜಯಗಳಿಸಿದ್ದಾರೆ.
ವಿಧಾನಸಭೆಯ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿರುವ ಬಿಜೆಪಿ, ವಿಧಾನಪರಿಷತ್‌ನ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ.
ವಿಧಾನಸಭೆ ಉಪಚುನಾವಣೆಯಲ್ಲಿ ಸೋತು ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ವಿಧಾನಪರಿಷತ್‌ನ ಚುನಾವಣೆಯಲ್ಲೂ ಸೋಲಾಗಿದೆ.