ಆಗಸ್ಟ್ ೫ ಗೃಹಜ್ಯೋತಿ ಯೋಜನೆಗೆ ಚಾಲನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇದೇ ತಿಂಗಳ ೫ ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವರು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈನಿಂದಲೇ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಈ ತಿಂಗಳಿಂದ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್‌ನ ಲಾಭ ಸಿಗುತ್ತಿದ್ದು, ಕಲಬುರುಗಿಯಲ್ಲಿ ಅ. ೫ ರಂದು ಗೃಹಜ್ಯೋತಿ ಯೋಜನೆಯ ಚಾಲನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳುವರು ಎಂದರು.
ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡಿರುವ ಗೃಹಜ್ಯೋತಿ ಯೋಜನೆಗೆ ಇದುವರೆಗೂ ಒಟ್ಟು ೧.೪೨ ಕೋಟಿಗೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದರೆ ಶೂನ್ಯ ಬಿಲ್ ಈ ತಿಂಗಳು ಬರಲಿದೆ ಎಂದರು.
ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಗಡುವು ಇಲ್ಲ. ಜುಲೈ ೨೭ ರವರೆಗೆ ನೋಂದಾಯಿಸಿಕೊಡಿರುವವರು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಪಡೆಯುತ್ತಾರೆ. ಇನ್ನೂ ನೋಂದಣಿ ಮಾಡಿಕೊಳ್ಳದ ಗ್ರಾಹಕರು ಈಗಲೂ ನೋಂದಣಿ ಮಾಡಿಕೊಂಡು ಗೃಹಜ್ಯೋತಿಯ ಲಾಭ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಯಾವ ತಿಂಗಳ ಅರ್ಜಿ ಸಲ್ಲಿಸುತ್ತಾರೋ ಅದರ ಮುಂದಿನ ತಿಂಗಳಿಂದ ಯೋಜನೆಯ ಲಾಭ ಸಿಗುತ್ತದೆ ಎಂದು ಅವರು ಹೇಳಿದರು.
ಜುಲೈನಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿರುವುದರಿಂದ ಆ. ೧ ರಿಂದ ಶೂನ್ಯ ಬಿಲ್‌ನ್ನು ಎಲ್ಲ ಅರ್ಹರು ಪಡೆಯಲಿದ್ದಾರೆ. ಹಾಗಾಗಿಯೇ ಆ. ೫ ರಂದು ಚಾಲನಾ ಕಾರ್ಯಕ್ರಮವನ್ನು ಕಲ್ಬುರ್ಗಿಯಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಈಗಾಗಲೇ ಜಾರಿಯಲ್ಲಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ ೪೦ ಯೂನಿಟ್‌ನಿಂದ ೫೩ ಯೂನಿಟ್ ಉಚಿತ ವಿದ್ಯುತ್, ಅಮೃತ ಜ್ಯೋತಿಗೆ ೭೫ ಯೂನಿಟ್‌ಗೆ ಜತೆಗೆ ಶೇ. ೧೦ ರಷ್ಟು ಹೆಚ್ಚುವರಿ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದರು.
ಇಂಧನ ಇಲಾಖೆಗೆ ಹೊರೆ ಇಲ್ಲ
ಗೃಹಜ್ಯೋತಿ ಯೋಜನೆಯಿಂದ ಇಂಧನ ಇಲಾಖೆ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ. ಉಚಿತ ವಿದ್ಯುತ್‌ನ ಬಿಲ್ ಮೊತ್ತವನ್ನು ಸರ್ಕಾರ ಇಂಧನ ಇಲಾಖೆಗೆ ಪಾವತಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿ, ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ, ಬೆಸ್ಕಾಂ ವ್ಯವಸ್ಥಾಪಕ, ನಿರ್ದೇಶಕ ಮಹಂತೇಶ ಬಿಳಗಿ, ಕೆಪಿಟಿಸಿಎಲ್ ಮುಖ್ಯಸ್ಥ ಪಂಕಜ್‌ಕುಮಾರ್ ಪಾಂಡೆ ಉಪಸ್ಥಿತರಿದ್ದರು.