ಆಗಸ್ಟ್ ಅಂತ್ಯಕ್ಕೆ ಕೊರೊನಾ 3ನೇ ಅಲೆ

ನವದೆಹಲಿ, ಜು. ೧೬-ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ದೇಶದಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಇದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.
ಈಗಾಗಲೆ ವಿಶ್ವದ ೧೧೧ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಆದರೆ ಎರಡನೇ ಅಲೆಯ ಅಬ್ಬರದಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಐಸಿಎಂಆರ್ ಹಾಗೂ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ. ಸಮೀರನ್ ಪಾಂಡ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲು ಅವರು ಪ್ರಮುಖವಾಗಿ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು ಮತ್ತು ಎರಡನೇ ಸೋಂಕಿನ ಅಲೆಯಲ್ಲಿ ಕೊರೊನಾ ಸೋಂಕಿನ ವಿರುದ್ಧ ದೇಶದ ಜನರಲ್ಲಿ ರೋಗ ನಿರೋಧಶಕ್ತಿ ಇಳಿಕೆಯಾಗಿದೆ. ಇದು ದೇಶದಲ್ಲಿ ಮೂರನೇ ಅಲೆಗೆ ರಹದಾರಿಯಾಗಲಿದೆ ಎಂದು ಅವರು ಹೇಳಿದರು.
ಡೆಲ್ಟಾ ಪ್ಲಸ್‌ನಿಂದಾಗಿ ಮೂರನೇ ಅಲೆ ಬರುವ ಸಾಧ್ಯತೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಡೆಲ್ಟಾ ರೂಪಾಂತರದಿಂದ ಸಾರ್ವಜನಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಿದರು.
ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವ ಹಾಗೂ ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಖಿಲ ಭಾರತೀಯ ವೈದ್ಯಕೀಯ ಸಂಘದ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿರುವ ಬಗ್ಗೆ ಪಾಂಡ ಈ ಪ್ರತಿಕ್ರಿಯೆ ನೀಡಿದ್ದಾರೆ.
ವಿವಿಧ ಅಧ್ಯಯನಗಳು ಹಾಗೂ ಮಾದರಿಗಳನ್ನು ಗಮನಿಸಿದರೆ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ದೇಶದಲ್ಲಿ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದರೆ ಎರಡನೇ ಅಲೆಗಿಂತ ಮೂರನೇ ಅಲೆ ಅಪಾಯಕಾರಿಯಾಗಿರಲಿದೆ ಎಂದು ಐಐಟಿ ನಡೆಸಿದ ಮಾದರಿಯಲ್ಲಿ ವ್ಯಕ್ತವಾಗಿದೆ.
ಒಂದು ವೇಳೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಮುಂದುವರಿಸಿದರೆ ಸೋಂಕು ಹರಡುವಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು ಹಾಗೂ ಸೋಂಕನ್ನು ಕಡಿಮೆ ಮಾಡಬಹುದು ಎಂದು ಹೇಳಿರುವುದನ್ನು ಉಲ್ಲೇಖಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಮೂರನೇ ಅಲೆ ಹೆಚ್ಚಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ ೩ನೇ ಅಲೆ ತಡೆಗೆ ಲಸಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ಆದರೆ ದೇಶದ ಹಲವೆಡೆ ಲಸಿಕೆ ಕೊರತೆ ಉಂಟಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.