ಆಗಸ್ಟ್‌ಗೆ ರಜನಿ ಅಭಿನಯದ ಜೈಲರ್ ತೆರೆಗೆ

ಚೆನ್ನೈ,ಜು.೨-ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಯಾವಾಗ ಮುಗಿಯಲಿದೆ ಎಂಬ ಕುತೂಹಲ ತಲೈವಾ ಅಭಿಮಾನಿಗಳಲ್ಲಿತ್ತು. ಈಗ ಚಿತ್ರತಂಡ ಈ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ರಜನಿಕಾಂತ್ ಮತ್ತು ಚಿತ್ರತಂಡ ಕೇಕ್ ಕತ್ತರಿಸಿ ಚಿತ್ರೀಕರಣ ಮುಗಿಸಿ ಸಂಭ್ರಮಿಸಿದರು. ಆ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿದೆ. ‘ಥಿಯೇಟರಿನಲ್ಲಿ ಭೇಟಿಯಾಗೋಣ…’. ಆಗಸ್ಟ್ ೧೦ರಂದು ’ಜೈಲರ್’ ಚಿತ್ರ ತೆರೆಗೆ ಬರುತ್ತಿದ್ದು, ರಜನಿಕಾಂತ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಯೋಜನೆ ರೂಪಿಸಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ತಮನ್ನಾ ತೆರೆ ಹಂಚಿಕೊಂಡಿದ್ದಾರೆ. ಇಲ್ಲಿ ಅವರ ಲುಕ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಅವರ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
ನಟ ರಜನಿಕಾಂತ್ ಅವರಿಗೆ ೭೦ ವರ್ಷ. ಆದರೂ ಅವರ ನಟನಾ ಉತ್ಸಾಹ ಕಡಿಮೆಯಾಗಿಲ್ಲ. ಈಗಲೂ ಅನೇಕ ಸಿನಿಮಾಗಳಿಗೆ ಒಪ್ಪಿಗೆ ಕೊಡುತ್ತಿದ್ದಾರೆ. ಜೈಲರ್ ಪ್ರಸ್ತುತ ಅವರ ೧೬೯ ಚಲನಚಿತ್ರವಾಗಿದೆ.
ಕಲಾವಿದರ ವಿಷಯದಲ್ಲಿ ‘ಜೈಲರ್’ ಸಿನಿಮಾ ದೊಡ್ಡ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್ ಕುಮಾರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಜಾಕಿ ಶ್ರಾಫ್, ಮಲಯಾಳಂ ನಟ ಮೋಹನ್ ಲಾಲ್, ತೆಲುಗು ನಟ ಸುನೀಲ್, ಮಲಯಾಳಂ ನಟ ವಿನಾಯಕನ್, ತೆಲುಗು ನಟ ನಾಗಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದಲ್ಲಿ ರಮ್ಯಾ ಕೃಷ್ಣ, ಯೋಗಿ ಬಾಬು, ಕಿಶೋರ್, ಬಿಲ್ಲಿ ಮುರಳಿ, ಕರಾಟೆ ಕಾರ್ತಿ, ಕಲೈ ಅರಸನ್, ಜಾಫರ್ ಸಾಧಿಕ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ ‘ಬೀಸ್ಟ್’ ಚಿತ್ರವನ್ನು ನೆಲ್ಸನ್ ನಿರ್ದೇಶಿಸಿದ್ದರು. ಆದರೆ ಆ ಚಿತ್ರ ಹೀನಾಯವಾಗಿ ಸೋತಿದೆ. ಆದರೆ ನೆಲ್ಸನ್ ಅವರ ಪ್ರತಿಭೆಯ ಮೇಲೆ ನಂಬಿಕೆ ಇಟ್ಟಿರುವ ಸನ್ ಪಿಕ್ಚರ್ಸ್ ‘ಜೈಲರ್’ ಚಿತ್ರಕ್ಕೆ ಬಂಡವಾಳ ಹೂಡಿದೆ. ’ಜೈಲರ್’ ಆ?ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ.