ಬೆಂಗಳೂರು, ಜು. ೭- ಸರ್ಕಾರದ ಮಟ್ಟದಲ್ಲಿ ಶಾಸಕರುಗಳ ಕೆಲಸಗಳು ಆಗುತ್ತಿಲ್ಲ. ಕೆಲ ಸಚಿವರು ಶಾಸಕರುಗಳ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರುಗಳು ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಶಾಸಕರುಗಳು ಅದರಲ್ಲೂ ಹೊಸದಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ಹಲವು ಸಚಿವರುಗಳ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ಸಚಿವರುಗಳು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಮ್ಮ ಪತ್ರಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಹೀಗಾದರೆ ಹೇಗೆ, ಸಚಿವರುಗಳಿಗೆ ನಮ್ಮ ಕೆಲಸಗಳನ್ನು ಮಾಡಿಕೊಡಿ ಎಂದು ತಾಕೀತು ಮಾಡುವಂತೆ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.
ಶಾಸಕರುಗಳ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರುಗಳಿಗೆ ಶಾಸಕರುಗಳ ಕೆಲಸ ಮಾಡಿಕೊಡಿ. ಮತ್ತೆ ದೂರುಗಳು ಬರದಂತೆ ಎಚ್ಚರಿಕೆ ವಹಿಸಿ, ನಮ್ಮ ಪಕ್ಷದ ಶಾಸಕರುಗಳ ಕೆಲಸ ಮಾಡಿಕೊಡದಿದ್ದರೆ ಹೇಗೆ, ಎಲ್ಲ ಶಾಸಕರುಗಳನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಸೂಚನೆ ನೀಡಿದರು.
ವಿಧಾನಸಭೆಗೆ ಹಲವು ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಲೇ ಬೇಕು. ಮತ್ತೆ ಶಾಸಕರಿಂದ ದೂರು ಬಂದರೆ ಸಹಿಸಲ್ಲ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಸಚಿವರುಗಳಿಗೆ ಕಿವಿಮಾತು ಹೇಳಿದರು.
ನೀತಿ ಪಾಠ
ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲ ಶಾಸಕರುಗಳಿಗೂ ಸದನಕ್ಕೆ ಹಾಜರಾಗುವಂತೆ ಸೂಚನೆ ನೀಡಿ, ಸದನದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಿ. ಹೆಚ್ಚು ಆಕ್ರಮಣಕಾರಿಯಾಗಿ ವಿಷಯಗಳನ್ನು ಪ್ರಸ್ತಾಪಿಸಿ. ಸದನದಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಹೇಳಿದರು.
ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸದನದಲ್ಲಿ ಕುಳಿತು ಸದನ ರೀತಿ ರಿವಾಜುಗಳನ್ನು ಅರಿಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಹೇಳಿದರು.
ಅಭಿನಂದನೆ
ಶಾಸಕಾಂಗ ಪಕ್ಷದ ಸಭೆಯ ಆರಂಭದಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸಚಿವ ಭೋಸರಾಜು, ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್, ತಿಪ್ಪಣ್ಣ ಕಮಕನೂರು ಇವರನ್ನು ಅಭಿನಂದಿಸಲಾಯಿತು.
ಬಿಬಿಎಂಪಿ ಚುನಾವಣೆ
ಬೆಂಗಳೂರು ಮಹಾನಗರ ಪಾಲಿಕೆಗೆ ಇನ್ನು ೧೦ ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೆಂಗಳೂರಿನ ಶಾಸಕರು ಬಿಬಿಎಂಪಿ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದು, ಚುನಾವಣೆ ನಡೆಸುತ್ತೇವೆ. ಈಗಾಗಲೇ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆದಿವೆ. ಇನ್ನು ೧೦ ತಿಂಗಳ ಒಳಗೆ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.