ಆಕ್ಸಿಜನ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ: ಸಚಿವ ಸುಧಾಕರ್

ಮೈಸೂರು,ಏ.22:- ಇತ್ತಿಚೆಗೆ ರಾಜ್ಯದಲ್ಲಿ ಕಂಡು ಬಂದಿರುವ ಆಕ್ಸಿಜನ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಅವರು ಇಂದು ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಆಕ್ಸಿಜನ್ ಸಮಸ್ಯೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಲಾಗಿದೆ.
ಸಧ್ಯಕ್ಕೆ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. 5,500 ಮೆಟ್ರಿಕ್ ಟನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಜಂಬು ಸಿಲಿಂಡರ್ ಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಪೂರೈಕೆ ಸಂಬಂಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜತೆಯೂ ಚರ್ಚಿಸಿದ್ದೇವೆ, ಈಗಾಗಲೇ ಆಕ್ಸಿಜನ್ ಉತ್ಪಾದಕರ ಜೊತೆ ಮಾತುಕತೆ ನಡೆದಿದೆ. 40,000 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜಾಗಿದೆ ಎಂದು ತಿಳಿಸಿದರು.
ರೆಮ್ ಡಿಸಿವಿರ್ ಬಗ್ಗೆ ತಪ್ಪು ಕಲ್ಪನೆಯಿದೆ. ಅದನ್ನು ಪಡೆದರೆ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತೇವೆ ಎಂದುಕೊಂಡಿದ್ದಾರೆ. ಆದರೆ ರೆಮ್ ಡಿಸಿವಿರ್ ಗಿಂತ ಸ್ಟೆರಾಯ್ಡ್ ಪರಿಣಾಮಕಾರಿ. ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಎಲ್ಲಾ ಅರ್ಹರಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.
ಕೊರೊನಾ ಸಂಜೀವಿನಿ ಎಂದು ಬಿಂಬಿತವಾಗಿರುವ ರೆಮಿಡಿಸಿವಿರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ. ವೈಜ್ಞಾನಿಕವಾಗಿ ಅದು ಲೈಫ್ ಸೇವಿಂಗ್ ಡ್ರಗ್ ಅಲ್ಲ. ಜನ ಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲೂ ರೆಮಿಡಿಸಿವಿರ್ ಇಲ್ಲ. ನಾನು ವೈದ್ಯನಾಗಿ ಹೇಳಬೇಕೆಂದರೆ ಅದರ ಬದಲು ಸಿರಾಯಿಡ್ ಪರಿಣಾಮಕಾರಿಯಾಗಿದೆ. ಅದಕ್ಕಿಂತ ಕಡಿಮೆ ದರದ ಪರ್ಯಾಯ ಔಷಧಿಗಳಿವೆ. ಕೊರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ರೆಮಿಡಿಸಿವಿರ್ ಉತ್ಪಾದನೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೋನಾ ಜಾಸ್ತಿಯಾಗಿದೆ. ಬೇಡಿಕೆ ಹಚ್ಚಾಗಿದೆ. ಸ್ವಲ್ಪ ದಿನದಲ್ಲಿ ಪೂರೈಕೆ ಸರಿಯಾಗುತ್ತದೆ. ದೇಶದಲ್ಲಿ 8 ರಿಂದ 9 ಕಂಪನಿಗಳು ಮಾತ್ರ ರೆಮಿಡಿಸಿವಿರ್ ಉತ್ಪಾದನೆ ಮಾಡುತ್ತಿವೆ ಎಂದರು.
ಇಂದು ಮಧ್ಯಾಹ್ನ ಸಿಎಂ ಬಿ ಎಸ್ ಯಡಿಯೂರಪ್ಪ ಆಸ್ಪತ್ರೆಯಿಂದ ಮರಳಲಿದ್ದಾರೆ. ಆಸ್ಪತ್ರೆಯಿಂದ ಬಂದ ತಕ್ಷಣ ಲಸಿಕೆ ಕುರಿತ ಸಭೆ ನಡೆಯಲಿದೆ. ಸಭೆಯಲ್ಲಿ ಲಸಿಕೆ ಉಚಿತವಾಗಿ ನೀಡುವ ಬಗ್ಗೆ ಚರ್ಚೆ ನಡೆದು ತೀರ್ಮಾನವಾಗಲಿದೆ. ಎರಡು ಗಂಟೆ ಕಾಯಿರಿ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.
ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ರಾಜಸ್ಥಾನಕ್ಕೆ ಲಸಿಕೆ ಅಮೆರಿಕಾದಿಂದ ತಗೆದುಕೊಂಡು ಬಂದರಾ? ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡಬಾರದು. ಆಡಳಿತ ಪಕ್ಷದವರಾಗಲಿ ವಿರೋಧ ಪಕ್ಷದವರಾಗಲಿ ಕೊರೋನಾ ಬಗ್ಗೆ ಆರೋಪ ಮಾಡಿದರೆ ಸಣ್ಣವರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.