ಆಕ್ಸಿಜನ್ ಸಂಖ್ಯೆ ಹೆಚ್ಚಳಕ್ಕೆ ಈಶ್ವರ್ ಖಂಡ್ರೆ ಒತ್ತಾಯ

ಭಾಲ್ಕಿ:ಎ.22: ‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಕುರಿತಂತೆ ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮವಹಿಸದ ಕಾರಣ 500ಕ್ಕೂ ಹೆಚ್ಚು ಸೋಂಕಿತರು ಆಕ್ಸಿಜನ್, ಹಾಸಿಗೆ ಲಭ್ಯವಿಲ್ಲದೆ ಪರದಾಡುವಂತಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರ ದಾಟಿದೆ. ಆದರೆ, ಜಿಲ್ಲೆಯಲ್ಲಿ ಇರುವುದು ಕೇವಲ 500 ಆಕ್ಸಿಜನ್ ಸಹಿತ ಹಾಸಿಗೆಗಳು ಮಾತ್ರ. ಸದ್ಯ ಆಕ್ಸಿಜನ್ ಹಾಸಿಗೆಯ ಅಗತ್ಯ ಇರುವ ರೋಗಿಗಳ ಸಂಖ್ಯೆ ಸಾವಿರ ದಾಟಿದೆ. ಮುಂದಿನ ವಾರ ಈ ಸಂಖ್ಯೆ 1500 ದಾಟಲಿದೆ. ಮೇ 15ರ ಹೊತ್ತಿಗೆ 2000ಕ್ಕೂ ಹೆಚ್ಚು ಆಕ್ಸಿಜನ್ ಹಾಸಿಗೆಯ ಅಗತ್ಯ ಬೀಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತವಾಗಿ ಜಿಲ್ಲಾಡಳಿತ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್ ಹಾಸಿಗೆ ಅಗತ್ಯ ಇರುವ ಸೋಂಕಿತರಿಗೆ ಅದನ್ನು ಪೂರೈಸ ಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ತಿಂಗಳ ಅಂತ್ಯದವರೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಸುತ್ತಿರುವ ಆಕ್ಸಿಜನ್‌ಗಿಂತಲೂ ಮೂರು ಪಟ್ಟು ಆಮ್ಲಜನಕ ಸಿಲಿಂಡರ್‌ಗಳ ಅಗತ್ಯ ಬೀಳಲಿದ್ದು, ತಕ್ಷಣವೇ ಜಿಲ್ಲೆಗೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಮನೆಯಲ್ಲೇ ಪ್ರತ್ಯೇಕವಾಗಿದ್ದು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಆರೋಗ್ಯ ಇಲಾಖೆಗೆ ಹಿಡಿತವೇ ತಪ್ಪಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆದು, ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ ಲಭ್ಯವಾಗುವಂತೆ ಮಾಡಿ ಬಡ ರೋಗಿಗಳ ಪ್ರಾಣ ಉಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.