ಆಕ್ಸಿಜನ್, ರೆಮಿಡಿಸಿವಿರ್ ಹಾಗೂ ಹಾಸಿಗೆಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕಕ್ಕೆ ಆರೋಗ್ಯ ಸಚಿವರ ಸೂಚನೆ

ಕಲಬುರಗಿ,ಮೇ.1: ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗಿ ಆಸ್ಪತ್ರೆಗೆ ಸೇರುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ಹಾಸಿಗೆ ಲಭ್ಯತೆ, ಆಕ್ಸಿಜನ್ ಪೂರೈಕೆ ಹಾಗೂ ರೆಮಿಡಿಸಿವಿರ್ ಸರಿಯಾದ ಬಳಕೆ ಮತ್ತು ನಿರ್ವಹಣೆ ಮೇಲುಸ್ತುವಾರಿಗಾಗಿ ಕೆ.ಎ.ಎಸ್. ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ನಿರ್ದೇಶನ ನೀಡಿದರು.
ಶನಿವಾರ ಇಲ್ಲಿನ ಜಿಲ್ಲಾ ಪಂಚಾಯಿತಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದ್ದು, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಸೌಲಭ್ಯ ನೀಡುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಅರ್ಹ ರೋಗಿಗಳಿಗೆ ಆಕ್ಸಿಜನ್ ಪೂರೈಕೆ, ರೆಮಿಡಿಸಿವಿರ್ ಪೂರೈಕೆ, ಹಾಸಿಗೆ ಲಭ್ಯತೆ ಹಾಗೂ ರೋಟೇಷನ್ ಅಧಾರದ ಮೇಲೆ ವೈದ್ಯ ಸಿಬ್ಬಂದಿಗಳ ಕಾರ್ಯನಿರ್ವಹಣೆ ಮೇಲೆ ಕಟ್ಟುನಿಟ್ಟಾಗಿ ನಿಗಾ ವಹಿಸಲು 4 ಜನ ಹಿರಿಯ ಅಧಿಕಾರಿಗಳನ್ನು ನೇಮಿಸುವಂತೆ ಅವರು ಸೂಚಿಸಿದರು.
ಕಲಬುರಗಿ ನಗರದಲ್ಲಿ 4 ವೈದ್ಯಕೀಯ ಮಹಾವಿದ್ಯಾಲಯಗಳ ಒಟ್ಟು ಹಾಸಿಗೆಗಳ ವಿವರವನ್ನು ಪಡೆದು ಮಾತನಾಡಿದ ಸಚಿವರು ಇಲ್ಲಿ ಒಟ್ಟಾರೆ ಹಾಸಿಗೆಯಲ್ಲಿ ಶೇ.75ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಅಗತ್ಯವಿದ್ದಲ್ಲಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಷಿಯೇಷನ್‍ಗಳ ಸಭೆ ಕರೆದು ಅಲ್ಲಿಯೂ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ನೀಡಬೇಕು ಎಂದು ಅವರಿಗೆ ಮನವರಿಕೆ ಮಾಡಿ ಹಾಸಿಗೆಗಳನ್ನು ವಶಕ್ಕೆ ಪಡೆಯಬೇಕು ಎಂದು ಡಿ.ಸಿ ಅವರಿಗೆ ಡಾ.ಕೆ. ಸುಧಾಕರ ಅವರು ತಿಳಿಸಿದರು.
ಇಂದು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ದ್ವಾರದಲ್ಲಿ ಹಾಸಿಗೆ ಲಭ್ಯತೆ, ಪ್ರಮುಖ ಔಷಧಿಗಳ ಲಭ್ಯತೆ ಕುರಿತು ಸೂಚನಾ ಫಲಕದಲ್ಲಿ ಏಕೆ ಪ್ರದರ್ಶಿಸಿಲ್ಲ ಎಂದು ಡಿ.ಎಚ್.ಓ ಡಾ. ಶರಣಬಸಪ್ಪ ಗಣಜಲಖೇಡ ಅವರನ್ನು ಪ್ರಶ್ನಿಸಿದ ಸಚಿವರು ಕೂಡಲೇ ನಗರದ ಎಲ್ಲಾ ಕೋವಿಡ್ ಆಸ್ಪತ್ರೆಗಳ ಸೂಚನಾ ಫಲಕದಲ್ಲಿ ಈ ಬಗ್ಗೆ ಮಾಹಿತಿ ಅಳವಡಿಸಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು.
ಪ್ರಸ್ತುತ ಕೋವಿಡ್ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಮುಂದಿನ 2 ತಿಂಗಳ ಕಾಲ ಆರೋಗ್ಯ ಇಲಾಖೆ ಮತ್ತು ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ ಕಠಿಣವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಸಾರ್ವಜನಿಕರು ದೇವರ ರೂಪದಲ್ಲಿ ವೈದ್ಯರನ್ನು ಕಾಣುತ್ತಾರೆ. ಇದನ್ನರಿತು ಆರೋಗ್ಯ ಇಲಾಖೆ ಮತ್ತು ವೈದ್ಯ ಸಿಬ್ಬಂದಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ರೋಗಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಿ, ಮೆಡಿಕಲ್ ಕಿಟ್ ವಿತರಿಸಿ: ರೋಗಲಕ್ಷಣವಿಲ್ಲದೆ ಕೋವಿಡ್ ಸೋಂಕು ತಗುಲಿ ಹೋಂ ಐಸೋಲೇಷನ್‍ನಲ್ಲಿರುವ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಜಿಲ್ಲಾಡಳಿತದಿಂದ ತುರ್ತಾಗಿ ಮಾಡಬೇಕಾಗಿದೆ. ಯಾವುದೇ ರೋಗಲಕ್ಷಣ ಇಲ್ಲದಿದ್ದರೂ ಅನಗತ್ಯ ಭಯಕ್ಕೆ ಒಳಗಾಗಿ ಇವರು ಆಕ್ಸಿಜನ್, ರೆಮಿಡಿಸಿವಿರ್ ಬೇಡಿಕೆಗೆ ಇಡುತ್ತಿರುವುದರಿಂದ ಅನಗತ್ಯ ಆತಂಕಕ್ಕೆ ಕಾರಣವಾಗಿದೆ. ಇವರಲ್ಲಿನ ಮಾನಸಿಕ ಖಿನ್ನತೆಯನ್ನು ನಿವಾರಿಸಲು ಅವರೊಂದಿಗೆ ವೈದ್ಯ ಸಿಬ್ಬಂದಿಗಳ ಸತತ ಸಂಪರ್ಕ ಅಗತ್ಯ. ಇವರಿಗೆ ಪಾಸಿಟಿವ್ ರಿಪೆÇೀರ್ಟ್ ತಿಳಿಸುವಾಗಲೆ ಅಗತ್ಯ ಔಷಧಿಗಳ “ಮೆಡಿಕಲ್ ಕಿಟ್” ನೀಡಬೇಕು. ಎಸ್.ಡಿ.ಆರ್.ಎಫ್. ನಿಧಿಯಡಿ ಜಿಲ್ಲಾಧಿಕಾರಿಗಳು ಮುಂದಿನ ಒಂದು ತಿಂಗಳಿಗಾಗಿ ಬೇಕಾಗುವ “ಮೆಡಿಕಲ್ ಕಿಟ್” ಗಳನ್ನು ಖರೀದಿಸಬಹುದಾಗಿದೆ. ಹೋಂ ಐಸೋಲೇಷನ್‍ನಲ್ಲಿದ್ದವರನ್ನು ಅನಗತ್ಯ ಹೊರಗಡೆ ತಿರುಗಾಡದಂತೆ ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡಬೇಕು. ಇದು ಸಾಧ್ಯವಾದಲ್ಲಿ ಕೋವಿಡ್ ಸೋಂಕಿನ ಸರಪಳಿ ಕಡಿತದಲ್ಲಿ ನೀವು ಯಶಸ್ವಿಯಾಗುವಿರಿ ಎಂದರು.
ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಾಗಿ ಪಾಲನೆಗೆ ಸೂಚನೆ: ಕೋವಿಡ್ ಕಫ್ರ್ಯೂ ಜಾರಿಯಲ್ಲಿದ್ದರೂ ಕಲಬುರಗಿ ನಗರದಲ್ಲಿ ಜನರು ಓಡಾಡುತ್ತಿರುವುದು ನಾನು ಗಮನಿಸಿದ್ದೇನೆ. ಇದಕ್ಕೆ ಕಡಿವಾಣ ಹಾಕಲೇಬೇಕು ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಡಿ.ಸಿ.ಪಿ ಕಿಶೋರ ಬಾಬು ಅವರಿಗೆ ನಿರ್ದೇಶನ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇದೂವರೆಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಎಷ್ಟು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿ.ಸಿ.ಪಿ. ಕಿಶೋರ ಬಾಬು ಇದೂವರೆಗೆ ನಗರದಲ್ಲಿ ಮಾಸ್ಕ್ ಧರಿಸದೆ ಇರುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದ 1800 ಜನರಿಂದ 5 ಲಕ್ಷ ರೂ. ಕ್ಕಿಂತ ಹೆಚ್ಚು ದಂಡ ವಸೂಲು ಮಾಡಿದೆ. 77 ಪ್ರಕರಣ ದಾಖಲಿಸಿದೆ. ಶನಿವಾರವೇ 15 ವಾಣಿಜ್ಯ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿದೆ. 500 ವಾಹನಗಳನ್ನು ಸೀಜ್ ಮಾಡಿದೆ. 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದ ಕಾರಣಕ್ಕಾಗಿ 3 ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕೇಸ್ ದಾಖಲಿಸಿದೆ ಎಂದು ವಿವರಿಸಿದರು.
ರೆಮಿಡಿಸಿವಿರ್ ಸರಿಯಾಗಿ ಬಳಕೆಯಾಗಲಿ: ಜಿಲ್ಲೆಯಲ್ಲಿ ಕೋವಿಡ್ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ರೆಮಿಡಿಸಿವಿರ್ ಇಂಜೆಕ್ಷನ್ ಪೂರೈಕೆಯಾಗಬೇಕು. ಅನಗತ್ಯವಾಗಿ ಬಳಕೆಯಾಗಬಾರದು ಮತ್ತು ಕೃತಕ ಅಭಾವ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿಗಾವಹಿಸುವುದು ಮತ್ತು ನಿರ್ಲಕ್ಷ್ಯತೆ ವಹಿಸಿದಲ್ಲಿ ತಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಉಪ ಔಷಧ ನಿಯಂತ್ರಕ ಭಂಡಾರಿಯವರಿಗೆ ವೈದ್ಯಕೀಯ ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದರು.
ಆಯಾ ದಿನವೇ ಕೋವಿಡ್ ಡೆತ್ ಆಡಿಟ್ ಪರಿಶೀಲಿಸಿ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗೆ ಚಿಕಿತ್ಸೆ ನೀಡುತ್ತಾ ಕೊನೆ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವ ವಾಡಿಕೆ ಸರಿಯಾದುದ್ದಲ್ಲ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮರಣ ಪ್ರಮಾಣ ತಗ್ಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಡೆತ್ ಪ್ರಕರಣದಲ್ಲಿ ಆಯಾ ದಿನವೆ ಡೆತ್ ಅಡಿಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನಹರಿಸಿ: ಕೊರೋನಾ ಮಹಾಮಾರಿ ನಿಯಂತ್ರಣ ನಿಟ್ಟಿನಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಆಯುμï ಇಲಾಖೆಯೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಮತ್ತು ಜನರನ್ನು ಜಾಗೃತಗೊಳಿಸಬೇಕು ಎಂದು ಆಯುμï ಇಲಾಖೆಯ ಉಪನಿರ್ದೇಶಕಿ ಡಾ.ಗಿರಿಜಾ ಅವರಿಗೆ ಸಚಿವರು ಸೂಚಿಸಿದರು.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಮಾತನಾಡಿ ಕಲಬುರಗಿಯಲ್ಲಿ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಇಂಜೆಕ್ಷನ್ ಪ್ರಮುಖ ಕೊರತೆಯಾಗಿದ್ದು, ಇದನ್ನು ತುರ್ತಾಗಿ ನಿವಾರಿಸಬೇಕಿದೆ. ಬಳ್ಳಾರಿ ಮತ್ತು ಬೀದರದಿಂದ ಆಕ್ಸಿಜನ್ ಪೂರೈಕೆಗೆ 4 ಕ್ಯಾರಿಯರ್ ಟ್ಯಾಂಕರ್ ಕೂಡಲೆ ಜಿಲ್ಲೆಗೆ ಒದಗಿಸಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಅವರು ಮಾತನಾಡಿ ಸೇಡಂ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಹಾಗೂ ಇಲ್ಲಿ ಕೋವಿಡ್ ಸೋಂಕು ತಪಾಸಣೆಯ ಲ್ಯಾಬ್ ಸ್ಥಾಪಿಸಬೇಕು ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.
450 ಸಿಲಿಂಡರ್ ಬೇಕು: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪ್ರಸ್ತುತ 68 ಜಂಬೋ ಸಿಲೆಂಡಿರ್ ಇವೆ. ಇದಲ್ಲದೆ ಬಳ್ಳಾರಿ ಮತ್ತು ಬೀದರದಿಂದ ಆಕ್ಸಿಜನ್ ಕ್ಯಾರಿಯರ್ ಟ್ಯಾಂಕರ್ ಮೂಲಕ ಆಕ್ಸಿಜನ್ ಅಮದು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲಿ ಶ್ರೀ ಸಿಮೆಂಟ್ ಮಾತ್ರ ಆಕ್ಸಿಜನ್ ಉತ್ಪಾದನಾ ಘಟಕ ಹೊಂದಿದ್ದು, ಅದು ಆಕ್ಸಿಜನ್ ಪೂರೈಸುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 450 ಜಂಬೋ ಸಿಲೆಂಡರ್ ಅವಶ್ಯಕತೆವಿದೆ. ಕೋವಿಡ್ ಕಫ್ರ್ಯೂ ಕಟ್ಟುನಿಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಪ್ರತಿನಿತ್ಯ ನಗರ, ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದೆ. ನಿಯಮ ಉಲ್ಲಂಘಿಸಿದ 4 ಮದುವೆ ಕಲ್ಯಾಣ ಮಂಟಪಗಳನ್ನು ಮತ್ತು 22 ವಾಣಿಜ್ಯ ಅಂಗಡಿಗಳನ್ನು ಮುಚ್ಚಲಾಗಿದೆ. ತಾಲೂಕಾ ಹಂತದಲ್ಲಿಯೂ ತಹಶೀಲ್ದಾರ ನೇತೃತ್ಬದಲ್ಲಿ ಕಟ್ಟುನಿಟ್ಟಾಗಿ ಕಫ್ರ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಡಿ.ಹೆಚ್.ಓ ಡಾ. ಶರಣಬಸಪ್ಪ ಗಣಜಖೇಡ್ ಅವರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಹಾಸಿಗೆ ಲಭ್ಯತೆ, ಆಕ್ಸಿಜನ್ ಪೂರೈಕೆ, ಸಕ್ರಿಯ ಮತ್ತು ಒಟ್ಟು ಪ್ರಕರಣಗಳು, ಹೋಂ ಐಸೋಲೇಷನ್‍ನಲ್ಲಿದ್ದವರಿಗೆ ನೀಡಲಾಗುತ್ತಿರುವ ಉಪಚಾರ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಶಾಸಕರಾದ ಸುಭಾಷ ಗುತ್ತೇದಾರ, ಡಾ. ಅವಿನಾಶ್ ಜಾಧವ, ಖನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ.ಪಾಟೀಲ್, ಶಶೀಲ್ ಜಿ. ನಮೋಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀμï ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ ಪಾಟೀಲ, ವಿಭಾಗೀಯ ಸಹ ನಿರ್ದೇಶಕ ಡಾ.ಶಿವಾನಂದ ಸುರಗಾಳಿ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಸೇದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಮಹಾವಿದ್ಯಾಲಯಗಳ ಮುಖ್ಯಸ್ಥರು ಇದ್ದರು.