ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ: 24 ಮಂದಿ ಸಾವು

ಚಾಮರಾಜನಗರ , ಮೇ.03- ಆಕ್ಸಿಜನ್ ಕೊರತೆಯಿಂದ ಉಸಿರಾಟದ ಸಮಸ್ಯೆಯಿಂದ ಸುಮಾರು 24 ಕ್ಕಿಂತಲೂ ಹೆಚ್ಚು ರೋಗಿಗಳು ಸಾವನ್ನಪ್ಪಿರುವ ಭಾರಿ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 10.30 ರವರೆಗೆ ಸಾಕಾಗುವಷ್ಟು ಮಾತ್ರ ಆಕ್ಸಿಜನ್ ದಾಸ್ತಾನು ಇತ್ತು. ಆದರೆ ರಾತ್ರಿ 10.30 ರ ನಂತರ ಬೆಳಿಗ್ಗೆವರೆಗೆ ಆಕ್ಸಿಜನ್ ಸಿಗದೆ ನರಳಿನರಳಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ 10.30 ರಲ್ಲಿ ಆಕ್ಸಿಜನ್ ಖಾಲಿ ಆಗಿರುತ್ತದೆ. ಆದರೆ ಜಿಲ್ಲಾ ಆಸ್ಪತ್ರೆಯವರು ಸೂಕ್ತ ಗಮನ ಹರಿಸದೆ ಖಾಲಿ ಆದ ಸಿಲಿಂಡರ್ ಅನ್ನು ಸಕಾಲದಲ್ಲಿ ಪೂರೈಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಸುಮಾರು 24 ಮಂದಿ ರೋಗಿಗಳು ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಆಕ್ಸಿಜನ್ ಸಿಲಿಂಡರ್ ಖಾಲಿ ಆದ ನಂತರ ಕೋವಿಡೇತರ ರೋಗಿಗಳ ಸಂಬಂಧಿಕರು ಬೀಸಣಿಗೆ, ಪೇಪರ್ ಹಾಗೂ ಟವಲ್‍ನಿಂದ ಗಾಳಿ ಬೀಸುತ್ತಿದ್ದ ದೃಶ್ಯಗಳು ಸಹ ಕಂಡು ಬಂದಿವೆ. ಆದರೂ ಸಹ ರೋಗಿಗಳ ಬದುಕುಳಿಯಲು ಸಾಧ್ಯವಾಗಲಿಲ್ಲ.
ಆಮ್ಲಜನಕ ಮುಗಿದಿರುವುದರಿಂದ ರೋಗಿಗಳ ಕಡೆಯವರು ಜಿಲ್ಲಾಧಿಕಾರಿ ಡಾ. ರವಿ ಹಾಗೂ ಡಿಹೆಚ್‍ಓ ರವರುಗಳಿಗೆ ಈ ಪರಿಸ್ಥಿತಿ ವಿವರಿಸಲು ಕರೆ ಮಾಡಿದರೆ ರಾತ್ರಿ ಕರೆ ಸ್ವೀಕರಿಸಲಿಲ್ಲವೆಂದು ಆರೋಪಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿಯವರ ಮನೆಗೂ ಸಹ ಮಧ್ಯರಾತ್ರಿ ಹೋಗಿ ಅವರಿಗೆ ವಿಷಯ ಮನವರಿಕೆ ಮಾಡಲು ಯತ್ನಿಸಿದಾಗ ಪೆÇಲೀಸರು ಡಿಸಿಯವರನ್ನು ಈಗ ಎಬ್ಬಿಸಲು ಸಾಧ್ಯವಿಲ್ಲ ಎಂದು ವಾಪಸ್ ಕಳಿಸಿದರು ಎಂದು ಮಾಧ್ಯಮದವರೊಂದಿಗೆ ಅಸಹಾಯಕತೆ ತೋಡಿಕೊಂಡರು.
ಹಾಲಿ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್‍ಗಳು, 50 ಆಕ್ಸಿಜನ್ ಬೆಡ್‍ಗಳು ಇವೆ. ಈಗ ಆಮ್ಲಜನಕ ಕೊರತೆಯಾಗಿರುವುದರಿಂದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮರ್ಪಕವಾಗಿ ಅಕ್ಸಿಜನ್ ಪೂರೈಕೆಯಾಗದೆ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಕೋರೋನ ಸೋಂಕಿತರು ನರಳಾಡುತ್ತಿದ್ದಾರೆ.
ನಗರಕ್ಕೆ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿಯಿಂದ 2 ದಿನಗಳ ಹಿಂದಿನವರೆಗೂ ಆಮ್ಲಜನಕ ಪೂರೈಕೆ ಆಗುತ್ತಿತ್ತು. ಅಲ್ಲದೆ 5 ದಿನಗಳ ಹಿಂದೆಯμÉ್ಟೀ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕವನ್ನು ಆರಂಭಿಸಲಾಗಿದೆ. ಇದನ್ನು ಒಮ್ಮೆ ತುಂಬಿದರೆ 2 ದಿನಕ್ಕೆ ಆಗುವಷ್ಟು ಆಕ್ಸಿಜನ್ ಆಸ್ಪತ್ರೆಯ ರೋಗಿಗಳಿಗೆ ದೊರಕುತ್ತದೆ. ಈ ಆಕ್ಸಿಜನ್ ಸಹ ಇಂದು ರಾತ್ರಿ ಮುಗಿದ ಕಾರಣ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ.
ಸಿಲಿಂಡರ್ ಕೊರತೆ ಉಂಟಾಗುವ ಬಗ್ಗೆ ಮುಂಚೆಯೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಾಗಲೀ, ಜಿಲ್ಲಾ ಆರೋಗ್ಯಾಧಿಕಾರಿಯಾಗಲೀ ಅಥವಾ ಜಿಲ್ಲಾ ವೈದ್ಯಾಧಿಕಾರಿಗಳಾಗಲೀ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಈ ಘನ ಘೋರ ಸಾವುಗಳು ಸಂಭವಿಸುತ್ತಿರಲಿಲ್ಲ.
ಈಗ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಮ್ಲಜನಕ ಹೊತ್ತ ವಾಹನ ಸೋಮವಾರ ಬೆಳಿಗ್ಗೆ 11 ಅಥವಾ 12 ಗಂಟೆ ವೇಳೆಗೆ ತಲುಪುವ ನಿರೀಕ್ಷೆ ಇದೆ. ಆದರೆ ಅಲ್ಲಿಯವರೆಗೆ ಬೇಕಾಗುವಷ್ಟು ಆಮ್ಲಜನಕ ಸಿಲಿಂಡರ್‍ಗಳು ದೊರಕದ ಕಾರಣ ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಅಡಚಣೆ ಉಂಟಾಗುತ್ತದೆ. ಇದರಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ರೋಗಿಗಳ ಕುಟುಂಬದವರು ಹಾಗೂ ವೈದ್ಯರು ಆತಂಕಕ್ಕೀಡಾಗಿದ್ದಾರೆ.
ಇದಲ್ಲದೇ ಮೈಸೂರು ಜಿಲ್ಲಾಧಿಕಾರಿಯವರು, ಮೈಸೂರು ಜಿಲ್ಲೆ ಹೊರತು ಪಡಿಸಿ ನೆರೆಯ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡಬಾರದು ಎಂದು ಗ್ಯಾಸ್ ಏಜೆನ್ಸಿಗೆ ಆದೇಶಿಸಿರುವ ಕಾರಣ, ಜಿಲ್ಲೆಗೆ ಆಮ್ಲಜನಕ ಸಿಲಿಂಡರ್‍ಗಳನ್ನು ಸದರನ್ ಗ್ಯಾಸ್‍ನವರು ನೀಡಿಲ್ಲ. ಹೀಗಾಗಿ ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಅಗತ್ಯ ಪ್ರಮಾಣದ ಸಿಲಿಂಡರ್‍ಗಳು ದೊರಕಲಿಲ್ಲ ಎಂಬ ಆರೋಪವು ಸಹ ಕೇಳಿಬರುತ್ತಿದೆ.
ಮಾಧ್ಯಮಗಳಲ್ಲಿ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಗಾಬರಿಗೊಂಡ ರೋಗಿಗಳ ಸಂಬಂಧಿಕರು ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿ ತಮ್ಮವರ ಸಾವನ್ನಪ್ಪಿರುವುದನ್ನು ಕಂಡು ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಈ ಸಾವು ಆಕ್ಸಿಜನ್ ಕೊರತೆಯಿಂದ ಆಗಿಲ್ಲ. ಬದಲಾಗಿ ಬೇರೆ ಬೇರೆ ಕಾಯಿಲೆಗಳಿಂದ ಮೃತಪಟ್ಟಿರುತ್ತಾರೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ರೋಗಿಗಳ ಹೆಣಗಳ ರಾಶಿ ರಾಶಿಯೇ ಕಂಡು ಬರುತ್ತಿದೆ.
ಈಗ ರೋಗಿಗಳ ಸಾವಿನ ನಂತರ ಮೃತರ ಸಂಬಂಧಿಕರು ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಒಟ್ಟಾರೆ ಇದು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ 24 ಜನರ ಪ್ರಾಣ ಬಲಿಯಾಗಿದೆ. ಇದಕ್ಕೆ ಯಾರು ಹೊಣೆ, ಜಿಲ್ಲಾಡಳಿತವೋ ಅಥವಾ ಜಿಲ್ಲಾ ಉಸ್ತುವಾರಿ ಸಚಿವರೋ, ಸರ್ಕಾರವೋ, ಶಾಸಕರೋ ಎಂಬದು ಇನ್ನಷ್ಟೇ ತಿಳಿಯಬೇಕಿದೆ.