ಆಕ್ಸಿಜನ್ ದುರಂತಕ್ಕೆ ಒಂದು ತಿಂಗಳು: ಕಾಂಗ್ರೆಸ್ ಪ್ರತಿಭಟನೆ

ಚಾಮರಾಜನಗರ, ಜೂ.4- ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ಅಕ್ಸಿಜನ್ ಕೊರತೆಯಿಂದ 34 ಮಂದಿ ಮೃತಪಟ್ಟು ಇಂದಿಗೆ ಒಂದು ತಿಂಗಳಾಗಿದ್ದು, ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡದ ಬಿಜೆಪಿ ಸರ್ಕಾರ ವಿರುದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸತ್ತಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಮುಂದೆ ನಡೆದ ಧರಣಿಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಪಿ. ಮರಿಸ್ವಾಮಿ, ಶಾಸಕ ಸಿ. ಪುಟ್ಟರಂಗಶೆಟ್ಟಿ ವಹಿಸಿದ್ದರು. ಬಿಜೆಪಿ ಸರ್ಕಾರ ವಿರುದ್ದ ಘೋಷಣೆಗಳನ್ನು ಕೂಗಿದರು. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಜ್ಯಪಾಲರ ಆಡಳಿತ ಜಾರಿಗೊಳಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರ ದುರಾಳಿತದಿಂದಾಗಿ ಅಮಾಯಕ 34 ಮಂದಿ ರೋಗಿಗಳು ಮೃತಪಟ್ಟು ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಇದುವರಗೆ ಸಹ ಸರ್ಕಾರ ಈ ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಂಡಿಲ್ಲ. ಅಲ್ಲದೇ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರವನ್ನು ನೀಡಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮವಾಗಿಲ್ಲ ಎಂದು ದೂರಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸರ್ಕಾರ ನಿರ್ಲಕ್ಷ್ಯವೇ ಕಾರಣ. ಘಟನೆಯಲ್ಲಿ 34ಕ್ಕು ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಸುಳ್ಳು ಲೆಕ್ಕ ನೀಡಿ, ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲಾಗಿದೆ. ಮೃತಪಟ್ಟ ಕುಟುಂಬಗಳಿಗೆ ಕನಿಷ್ಟ 20 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ನಾವೆಲ್ಲರು ಒತ್ತಾಯ ಮಾಡುತ್ತಾ ಬಂದಿದ್ದೇವೆ. Wಟನೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ದ ಕ್ರಮವಾಗಿಲ್ಲ. ಇದೊಂದು ಎಮ್ಮೆ ಚರ್ಮದ ಸರ್ಕಾರವಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್, ಜಿ.ಪಂ. ಸದಸ್ಯ ಸದಾಶಿವಮೂರ್ತಿ, ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗÀಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಕೆಪಿಸಿಸಿ ಸದಸ್ಯಯ ಸೈಯದ್ ರಫಿ, ಅರುಣ್‍ಕುಮಾರ್, ಎಎಚ್‍ಎನ್ ಖಾನ್, ತೈಸಿಪ್ ಖಾನ್, ಹೆಬ್ಬಸೂರು ಮಧು ಮೊದಲಾದವರು ಇದ್ದರು.