ಆಕ್ಸಿಜನ್ ಟ್ಯಾಂಕರ್‌ಗಳಿಗೆ ಮುಕ್ತ ಸಂಚಾರ

ಬೆಂಗಳೂರು, ಏ.೨೪- ಕೋವಿಡ್ ಎರಡನೇ ಅಲೆ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆ ನಗರಕ್ಕೆ ಆಗಮಿಸುತ್ತೀರುವ ಆಕ್ಸಿಜನ್ ಟ್ಯಾಂಕರ್ ವಾಹನಗಳಿಗೆ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸಲಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ನಗರದ ಹೊರಭಾಗಳಿಂದ ಆಕ್ಸಿಜನ್ ಹೊತ್ತು ಹಲವು ವಾಹನಗಳು ನಗರವನ್ನು ಪ್ರವೇಶ ಮಾಡುತ್ತಿವೆ.ಹೀಗಾಗಿ, ಯಾವುದೇ ರೀತಿಯಲ್ಲಿ ತಡೆ ಆಗದಂತೆ ನಾಲ್ಕು ಹಸಿರು ಕಾರಿಡಾರ್‌ಗಳನ್ನು ರಚಿಸಿ ನೋಡಿಕೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್. ರವಿಕಾಂತ ಗೌಡ ಪ್ರತಿಯೊಂದು ಆಮ್ಲಜನಕ ಟ್ಯಾಂಕರ್‌ಗಳು ನೂರು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ ಹಸಿರು ಕಾರಿಡಾರ್‌ಗಳನ್ನು ರಚಿಸುವುದು ಅತ್ಯಗತ್ಯವಾಗಿದೆ.ಹಾಗಾಗಿ, ಆದ್ಯತೆಯ ಆಧಾರದ ಮೇಲೆ ಹಸಿರು ಕಾರಿಡಾರ್ ಮಾಡಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಆಮ್ಲಜನಕ ಟ್ಯಾಂಕರ್‌ಗಳು ಮೂಲ ಸ್ಥಳದಿಂದ ನಗರದ ಆಯಾ ಆಸ್ಪತ್ರೆಗಳಿಗೆ ತಲುಪಲು ೩೦ರಿಂದ ೩೫ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು, ಹಸಿರು ಕಾರಿಡಾರ್‌ಗಳು ಎಂದರೆ ಸಂಪೂರ್ಣವಾಗಿ ಟ್ರಾಫಿಕ್ ಫ್ರೀ ಸಂಚಾರ. ಇದು ಸಂಪುಟ ದರ್ಜೆಯ ಮಂತ್ರಿಗಳಿಗೆ ಒದಗಿಸಲಾದ ಟ್ರಾಫಿಕ್ ಕ್ಲಿಯರೆನ್ಸ್ ಮಾದರಿಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಕೋವಿಡ್ ತುರ್ತು ಸಂದರ್ಭಗಳಲ್ಲಿ ನಾಗರಿಕರು ಸಹ ನಿಯಂತ್ರಣ ಕೊಠಡಿಯನ್ನು ಸಹ ಸಂಪರ್ಕಿಸಬಹುದು. ನಾವು ಕೋವಿಡ್ ಮಾನಿಟರಿಂಗ್ ಗುಂಪಿನೊಂದಿಗೆ ಕರೆಯ ನೈಜತೆಯನ್ನು ಪರಿಶೀಲಿಸಿ ಕೆಲ ನಿಮಿಷಗಳಲ್ಲಿ ಹಸಿರು ಕಾರಿಡಾರ್ ಅನ್ನು ರಚಿಸುತ್ತೇವೆ ಎಂದು ಅವರು ವಿವರಿಸಿದರು.

ಮತ್ತೊಂದೆಡೆ ಆಂಬುಲೆನ್ಸ್‌ಗಳ ಸಂಖ್ಯೆ ಕಳೆದ ಕೆಲವು ವಾರಗಳಲ್ಲಿ ತೀವ್ರವಾಗಿ ಹೆಚ್ಚಾಗಿದೆ. ನಗರದಲ್ಲಿ ಒಂದು ದಿನದಲ್ಲಿ ೮೦೦ರಿಂದ ೮೫೦ ಆಂಬುಲೆನ್ಸ್‌ಗಳ ವೇಗದ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದರೆ, ಈ ಸಂಖ್ಯೆ ಈಗ ೧,೨೫೦ರಿಂದ ೧,೩೦೦ ರಷ್ಟಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.