ಆಕ್ಸಿಜನ್ ಕೋವಿಡ್ ಕೇರ್ ಸೆಂಟರ್ ಆರಂಭ

ಬೆಂಗಳೂರು, ಮೇ.೨೦-ಕೋವಿಡ್ ಸೋಂಕಿನ ಪ್ರಮಾಣ ತೀವ್ರ ಏರಿಕೆ ಆಗಿರುವ ಹಿನ್ನೆಲೆ ನಗರದ ತಾವರೆಕೆರೆ ವ್ಯಾಪ್ತಿಯಲ್ಲಿ ಆಕ್ಸಿಜನ್ ಸೌಲಭ್ಯಯುಳ್ಳ ನೂರು ಹಾಸಿಗೆಗಳ ಆರೈಕೆ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದು ವರ್ಷ ಫೌಂಡೇಷನ್ ಸಂಸ್ಥಾಪಕರೂ ಆದ ಸಿನಿಮಾ ನಿರ್ಮಾಪಕ ಬಿ.ವಿ.ಹರಿಪ್ರಸಾದ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಪೌರಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಹಂಚಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಪರಿಣಾಮ ಹಲವು ಜನರು ತೀವ್ರ ಆರೋಗ್ಯ ಸಮಸ್ಯೆಗೆ ಸಿಲುಕಿದ್ದಾರೆ.ಹಾಗಾಗಿ, ವರ್ಷ ಫೌಂಡೇಷನ್ ವತಿಯಿಂದ ೧೦೦ ಬೆಡ್ ವ್ಯವಸ್ಥೆಯ ಆರೈಕೆ ಕೇಂದ್ರ ಮಾಡಲಾಗುತ್ತಿದ್ದು, ಬಡ ಮತ್ತು ಕಾರ್ಮಿಕರಿಗೆ ಆದ್ಯತೆ ನೀಡಲಿದೆ ಎಂದರು.
ಈ ಕೋವಿಡ್ ಆರೈಕೆ ಕೇಂದ್ರ ದಲ್ಲಿ ಮೂಲಸೌಕರ್ಯಗಳ ಜೊತೆಗೆ, ಪೌಷ್ಟಿಕ ಆಹಾರ, ವೈದ್ಯಕೀಯ ಸೌಲಭ್ಯ ಗಳನ್ನು ನೀಡಲಾಗುತ್ತಿದೆ.ಜತೆಗೆ ರೋಗಿಗಳ ಆದ್ಯತೆ ಮೇರೆಗೆ ಔಷಧವನ್ನು ನೀಡಲಾಗುವುದು ಎಂದು ಹೇಳಿದರು.
ಆಕ್ಸಿಜನ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುವ ಹಿನ್ನೆಲೆ ಫೌಂಡೇಷನ್ ವತಿಯಿಂದ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ.ಇತ್ತೀಚಿಗೆ ತುಮಕೂರು ಸೇರಿದಂತೆ ಬೆಂಗಳೂರು ಹೊರ ಭಾಗದಲ್ಲೂ ಆಕ್ಸಿಜನ್ ಹಂಚುವ ಮೂಲಕ ಹಲವರ ಪ್ರಾಣವನ್ನು ರಕ್ಷಿಸಲಾಗಿದೆ.
ಅದೇ ರೀತಿ, ಪೌರಕಾರ್ಮಿಕರು, ಅನಾಥ ಆಶ್ರಮ ಮತ್ತು ಪೊಲೀಸರಿಗೆ ಎರಡು ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳ ಕಿಟ್ ಅನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಜತೆಗೆ ಆರೋಗ್ಯ ರಕ್ಷಣೆಗೆ ಬೇಕಾದ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.