ಆಕ್ಸಿಜನ್ ಕೊರತೆ: 4 ರೋಗಿಗಳ ಸಾವು ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ದುರ್ಘಟನೆ

ಕಲಬುರಗಿ ಮೇ 4: ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ಜನ ಕೊರೋನಾ ಸೋಂಕಿತರು ಮೃತ ಪಟ್ಟಿದ್ದಾರೆ.
ನಸುಕಿನ 4 ಗಂಟೆಗೆ ದುರ್ಘಟನೆ ಸಂಭವಿಸಿದ್ದು, ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 32 ಜನ ಸೋಂಕಿತರು ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ.ಇಲ್ಲಿಯವೆಗೂ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ.
ಚಾಮರಾಜನಗರದಲ್ಲಿ ನಿನ್ನೆ 23 ಜನ ಆಕ್ಸಿಜನ್ ಕೊರತೆಯಿಂದ ಮೃತರಾದ ಬೆನ್ನಲ್ಲೇ ಕಲಬುರಗಿಯಲ್ಲಿ ಈ ದುರ್ಘಟನೆ ಮರುಕಳಿಸಿದ್ದು,ಆತಂಕಕ್ಕೆ ಕಾರಣವಾಗಿದೆ.
ಮಾಲೀಕಯ್ಯ ಗುತ್ತೇದಾರ್ ಕರೆ:
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಹಿನ್ನಲೆಯಲ್ಲಿ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಗಂಭೀರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆಸ್ಪತ್ರೆಗೆ ತಕ್ಷಣ ಆಕ್ಸಿಜನ್ ಸಿಲಿಂಡರ್ ರವಾನೆ ಮಾಡಿದೆ.
ಇದೀಗ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗುತ್ತಿದ್ದು
ಆಸ್ಪತ್ರೆಯಲ್ಲಿನ ಉಳಿದ ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ
ಪ್ರಿಯಾಂಕ್ ಖರ್ಗೆ ಆಕ್ರೋಶ:
ಆಕ್ಸಿಜನ್ ಕೊರತೆಯಿಂದ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸಾವುಗಳ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದೆ. ಹೀಗಿದ್ದರೂ ಇಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಅನ್ನು ಮಹಾರಾಷ್ಟ್ರಕ್ಕೆ ಕಳಿಸುತ್ತಿದ್ದಾರೆ. ಸರಕಾರಕ್ಕೆ ಪತ್ರ ಬರೆದರೆ ಇದರಲ್ಲಿ ರಾಜಕೀಯ ಮಾಡಬೇಡಿ ಎಂಬ ಮಾರುತ್ತರ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂ.ವೈ ಪಾಟೀಲ ಭೇಟಿ:
ದುರಂತ ನಡೆದ ಅಫಜಲಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎಂ.ವೈ ಪಾಟೀಲ ಭೇಟಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಕೊರೋನಾ ನಿರ್ವಹಣೆ ವೈಫಲ್ಯಕ್ಕೆ ಸರಕಾರವೇ ಕಾರಣ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್‍ಗಳ ಕೊರತೆ ಇದೆ. ವೈದ್ಯ ಸಿಬ್ಬಂದಿಗಳ ಕೊರತೆಯೂ ಇದೆ.ಸರಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿನ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
.