ಆಕ್ಸಿಜನ್ ಕೊರತೆ ಸೋಂಕಿತರು, ಕಂಗಾಲು


ಬೆಂಗಳೂರು ಮೇ ೪: ಭೀಕರ ಸ್ವರೂಪದ ರೋಗಲಕ್ಷಣಗಳುಳ್ಳ ಸೋಂಕಿತರ ಆರೈಕೆಗೆ ಅತ್ಯಗತ್ಯವಿರುವ ಆಕ್ಸಿಜನ್ ಬೇಡಿಕೆ ಹಾಗೂ ಪೂರೈಕೆ ನಡುವೆ ರಾಜ್ಯದಲ್ಲಿ ಭಾರಿ ಕಂದರ ಸೃಷ್ಟಿಯಾಗಿದ್ದು, ಸಾವು ನೋವಿನ ಸಂಖ್ಯೆ ಇಂದು ಇನ್ನೂ ಭೀಕರ ವಾಗುವ ಆತಂಕ ಎದುರಾಗಿದೆ.
ಆಕ್ಸಿಜನ್ ಪೂರೈಕೆಯಲ್ಲಿ ಭಾರಿ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯರು ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸುತ್ತಿದ್ದು, ಸಂಬಂಧಿಕರು ದಿಕ್ಕುತೋಚದೆ ಕಂಗಾಲಾಗಿದ್ದಾರೆ.
ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನು ಅತಿ ಕಡಿಮೆ ಇದ್ದು, ಇಂದು ಸಂಜೆ ಒಳಗಾಗಿ ಸೂಕ್ತ ಪ್ರಮಾಣದ ಆಕ್ಸಿಜನ್ ಲಭ್ಯವಾಗದೇ ಹೋದರೆ ಸಾವಿನ ಸಂಖ್ಯೆ ನಿರೀಕ್ಷೆಗೆ ಮೀರಿ ಹೆಚ್ಚಾಗಲಿದೆ ಎಂದು ವೈದ್ಯರು ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನಿನ್ನೆ ೨೪ ಜನರನ್ನು ಬಲಿತೆಗೆದುಕೊಂಡ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇಂದು
ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಸೋಂಕಿತರು ಆಕ್ಸಿಜನ್ ಕೊರತೆಯಿಂದಾಗಿ ವಿಲಿವಿಲಿ ಒದ್ದಾಡಿ ಪ್ರಾಣ ತೆತ್ತಿದ್ದಾರೆ. ರಾಜ್ಯದ ಸುಮಾರು ೬೦೦ ಖಾಸಗಿ ಆಸ್ಪತ್ರೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಕೋವಿಡ್-೧೯ ಸೋಂಕಿತರ ಆರೈಕೆಗೆ ಮೀಸಲಿಡಲಾಗಿದೆ. ಈ ಆಸ್ಪತ್ರೆಗಳಿಗೆ ಪ್ರತಿದಿನ ೧೭೦೦ ಮೆಟ್ರಿಕ್ ಟನ್ ಆಕ್ಸಿಜನ ಅಗತ್ಯವಿದ್ದು, ಅದರಲ್ಲಿ ಶೇ.೫೦ ಕ್ಕೂ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಾಗುತ್ತಿದೆ. ಇದರಿಂದ ಪ್ರತಿದಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಬೆಂಗಳೂರು ಮಹಾನಗರಕ್ಕೆ ಪ್ರತಿದಿನ ೧೨೦೦ ಮೆಟ್ರಿಕ್ ಟನ್ ಆಕ್ಸಿಜನ ಅಗತ್ಯವಿದ್ದು, ಪ್ರಸ್ತುತ ಕೇವಲ ೩೦೦ರಿಂದ ೩೫೦ ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ಪೂರೈಕೆಯಾಗುತ್ತಿದೆ. ಇದರಿಂದ ಕಂಗಾಲಾಗಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಾಗದೆ ಕೈ ಚೆಲ್ಲುತ್ತಿದ್ದಾರೆ.
ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಪ್ರತಿದಿನ ಸರಾಸರಿ ೨.೫ ರಿಂದ ೩ ಮೆಟ್ರಿಕ್ ಟನ್ ಆಕ್ಸಿಜನ ಅಗತ್ಯವಿದ್ದು, ಈ ಪೈಕಿ ಸದ್ಯ ದಿನಕ್ಕೆ ೧.೫ ಟನ್ ಕಿಂತ ಹೆಚ್ಚು ಆಕ್ಸಿಜನ್ ಪಡೆಯಲು ಹರಸಾಹಸ ಪಡಬೇಕಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜೊಂದರಲ್ಲಿ ಸುಮಾರು ೨೦೦ ಸೋಂಕಿತರು ದಾಖಲಾಗಿದ್ದು, ಅವರ ಆರೈಕೆಗಾಗಿ ಸುಮಾರು ೩ ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ಸ್ಥಳೀಯ ಸಂಸದರು ಹಾಗೂ ಆಡಳಿತ ಮಂಡಳಿಯ ಪ್ರಯತ್ನದಿಂದ ನಿನ್ನೆ ಸಂಜೆವರೆಗೆ ಕೇವಲ೧.೬ ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಸಂಗ್ರಹಿಸಲು ಸಾಧ್ಯವಾಗಿದ್ದು, ಇಂದು ಸಂಜೆ ಒಳಗಾಗಿ ಕನಿಷ್ಠ ೩ ಮೆಟ್ರಿಕ್ ಟನ್ ಆಕ್ಸಿಜನ ದೊರೆಯದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆಗಳಿವೆಯೆಂದು ಮೂಲಗಳು ತಿಳಿಸಿವೆ.
ಅನೇಕ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರ ಸಂಬಂಧಿಕರಿಗೆ ಆಕ್ಸಿಜನ್ ಕೊರತೆ ಕುರಿತು ನಿನ್ನಿಂದಲೇ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸುತ್ತಿದ್ದು, ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಬಹುದು ಎಂಬ ಅವಕಾಶವನ್ನು ನೀಡುತ್ತಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತಿದಿನ ೮೫೦ ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಹಂಚಿಕೆ ಮಾಡಿದೆ. ಈ ಪೈಕಿ ನಿನ್ನೆ ೬೬೫ ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ಸರಬರಾಜು ಆಗಿದ್ದು, ೧೧೦ ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಬೇರೆ ರಾಜ್ಯದಿಂದ ಖರೀದಿ ಮಾಡಲು ಅವಕಾಶ ನೀಡಿದೆ. ಒರಿಸ್ಸಾದಿಂದ ನಿನ್ನೆ ಕೇವಲ ೩೦ ಟನ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆ, ಆಗಿದ್ದು ಇಂದು ೩೦ ಟನ್ ಪೂರೈಕೆಯಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿರುವ ಬಾರೂಕ ಗ್ಯಾಸ್ ಆಕ್ಸಿಜನ್ ಉತ್ಪಾದನಾ ಕೇಂದ್ರದಿಂದ ಪ್ರತಿದಿನ ೬೫ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ಈ ಪೈಕಿ ೧೦ ಟನ್ ಹಾಕ್ಸಿಜನ್ ಮಹಾರಾಷ್ಟ್ರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಈ ಸರಬರಾಜನ್ನು ಸ್ಥಗಿತಗೊಳಿಸಿ, ರಾಜ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಆಕ್ಸಿಜನ್ ಬಳಕೆಗೆ ಭಾರೂಕ ಕಂಪನಿ ಒಪ್ಪಿಗೆ ನೀಡಿದೆ.
ಆದರೂ ಸಹ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸವನ್ನು ಸರಿ ಹೋಗಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಪ್ರತಿದಿನ ೧-೨ ಸಾವು ಘಟಿಸುತ್ತಲೇ ಇದ್ದು, ಆದರೆ ಸಾವಿಗೆ ಕಾರಣ ಕೊರೋನಾ ಎಂದಷ್ಟೇ ದಾಖಲಾಗುತ್ತಿದೆ. ಸೋಂಕಿಗೆ ತುತ್ತಾಗಿರುವ ಬಹುತೇಕ ವೃದ್ಧರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಶೇಕಡ ೮೫ಕ್ಕೂ ಹೆಚ್ಚು ಸೋಂಕು ಆವರಿಸಿರುವ ವೃದ್ಧ ರೋಗಿಗಳಿಗೆ ವೈದ್ಯರು ಆಕ್ಸಿಜನ್ ಪೂರೈಕೆಯನ್ನು
ಸ್ಥಗಿತಗೊಳಿಸಿ, ಗಂಭೀರ ರೋಗಲಕ್ಷಣಗಳು ಇರುವ ಯುವ ಹಾಗೂ ಇತರೆ ರೋಗಿಗಳನ್ನು ಬದುಕಿಸಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಬದುಕಿಸಲು ಅಸಾಧ್ಯವಿರುವ ವೃದ್ಧ ರೋಗಿಗಳಿಗೆ ಆಕ್ಸಿಜನ್ ನೀಡುವುದಕ್ಕಿಂತ ಹೆಚ್ಚು ಅಸ್ವಸ್ಥರಾಗಿರುವ ಇತರೆ ರೋಗಿಗಳನ್ನು ಬದುಕಿಸಲು ವೈದ್ಯರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ನಗರದಲ್ಲಿ ಇಬ್ಬರು ಸೋಂಕಿತರು ಸಾವು
ಬೆಂಗಳೂರು, ಮೇ.೪-ಕೊರೊನಾ ಸೋಂಕು ತಗುಲಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ನೀಡುವ ಮೆಡಿಕಲ್ ಆಕ್ಸಿಜನ್‌ಗೆ ರಾಜ್ಯದಲ್ಲಿ ಹಾಹಾಕಾರ ಉಂಟಾಗಿದೆ.
ನಿನ್ನೆ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಆಸ್ಪತ್ರೆಯಲ್ಲಿ ೨೪ ರೋಗಿಗಳು ಮೃತಪಟ್ಟಿದ್ದರು. ಇಂತಹ ಘಟನೆ ನಗರದಲ್ಲೂ ಮರುಕಳಿಸುತ್ತಿದ್ದು, ಆಕ್ಸಿಜನ್ ಸಿಗದೆ ತಡರಾತ್ರಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ.
ಯಲಹಂಕ ಉಪನಗರದ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಇಬ್ಬರು ಬಲಿಯಾಗಿದ್ದಾರೆ. ಆದರೆ ಇಬ್ಬರು ಮೃತಪಟ್ಟ ಬಳಿಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿದೆ.
ತಡರಾತ್ರಿ ೧೨.೩೦ರ ಸುಮಾರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು. ಒಂದು ಗಂಟೆಯ ಬಳಿಕ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.
ವಿಪರ್ಯಾಸವೆಂದರೆ, ಅಷ್ಟೊತ್ತಿಗಾಗಲೇ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಆಕ್ಸಿಜನ್ ಖಾಲಿಯಾಗಿದ್ದರೂ ನೋಡಿಕೊಂಡಿಲ್ಲ ಎಂದು ಮೃತರ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ.