ಆಕ್ಸಿಜನ್ ಕೊರತೆ ಸರ್ಕಾರದ ವಿರುದ್ಧ ಎಐಡಿಎಸ್‌ಓ ಟೀಕೆ

ಬೆಂಗಳೂರು,ಏ.೨೬- ದೇಶಾದ್ಯಂತ ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜನರಿಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಡಿಎಸ್‌ಓನ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ತಿಳಿಸಿದ್ದಾರೆ.
ರೊನಾದಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವುದು ದುರಂತವಾಗಿದೆ. ಆಸ್ಪತ್ರೆಗಳಲ್ಲಿ ಮೂಲಭೂತವಾಗಿ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಬೇಕು, ಆದರೆ ಆಕ್ಸಿಜನ್‌ಗಾಗಿ ಜನ ಬೀದಿಬೀದಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಗೆ ಕೋಟ್ಯಾಂತರ ರೂ. ಖರ್ಚು ಮಾಡುವವರಿಗೆ ಜನರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಉಚಿತ ಲಸಿಕೆ, ವೆಂಟಿಲೇಟರ್ ಪೂರೈಕೆ ಸಾಧ್ಯವಾಗುವುದಿಲ್ಲವೆ? ಎಂದು ಪ್ರಶ್ನಿಸಿರುವ ಅವರು, ಸ್ವಾಂತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳ ಆಡಳಿತ ಕ್ರಮದಿಂದಾಗಿ ಇಂದು ದೇಶದ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ.