ಆಕ್ಸಿಜನ್ ಕೊರತೆ ನಿವಾರಣೆಗೆ ಕ್ರಮ: ಬೊಮ್ಮಾಯಿ

ಹಾವೇರಿ:ಮೇ.22: ಮುಂದಿನ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಗೆ ಪ್ರತಿದಿನ 6.7 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದರು.
ಹಾವೇರಿಯಲ್ಲಿ 1500 ಕಿ.ಲೀ. ಆಕ್ಸಿಜನ್ ಜನರೇಟರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಶಿಗ್ಗಾವಿ ಮತ್ತು ಹಾನಗಲ್ಲಿನಲ್ಲಿ 500 ಕಿ. ಲೀ. ಆಕ್ಸಿಜನ್ ಜನರೇಟರ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಹಿರೇಕೆರೂರು ಪಟ್ಟಣದಲ್ಲಿ ಆಕ್ಸಿಜನ್ ಜನರೇಟರ್ ಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ರಾಣೆಬೆನ್ನೂರಿನಲ್ಲಿ ಗ್ರಾಸಿಮ್ ಕಂಪನಿ ಹಾಗೂ ಸವಣೂರಿನಲ್ಲಿ ರುದ್ರ ಕಂಪನಿಗಳು ಸಿಎಸ್‍ಆರ್ ನಿಧಿ ಅಡಿ ಆಕ್ಸಿಜನ್ ಜನರೇಟರ್ ಗಳನ್ನು ಸ್ಥಾಪಿಸಲಿವೆ. ಹೀಗೆ ಜಿಲ್ಲೆಯಲ್ಲಿ ಆಕ್ಸಿಜನ್ ಅನ್ನು ಉತ್ಪಾದನೆ ಮಾಡಲಾಗುವುದು. ಮುಂದಿನ ಮೂರು – ನಾಲ್ಕು ತಿಂಗಳಲ್ಲಿ ಈ ಎಲ್ಲಾ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡುವಂತೆ ಕ್ರಮವಹಿಸಲಾಗುವುದು. ಅಕ್ಕಿಆಲೂರು ರಟ್ಟಿಹಳ್ಳಿ, ಬೊಮ್ಮನಹಳ್ಳಿ, ಗುತ್ತಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಆಕ್ಸಿಜನ್ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ. ತಜ್ಞ ವೈದ್ಯರು ಹಾಗೂ ಫಿಜಿಸಿಯನ್‍ಗಳ ಕೊರತೆ ಇದೆ. ವೆಂಟಿಲೇಟರ್ ಇದ್ದರೂ ಅದನ್ನು ಪ್ರಾರಂಭ ಮಾಡಲು ಟೆಕ್ನೀಷಿಯನ್‍ಗಳಿಲ್ಲ. ಅದರ ಜತೆ ಬ್ಲ್ಯಾಕ್ ಫಂಗಸ್ ಸಮಸ್ಯೆಗಳ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜೊತೆ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು.
ಒಟ್ಟು ಎರಡು ಕೋಟಿ ವ್ಯಾಕ್ಸಿನ್‍ಗಾಗಿ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ನಲ್ಲಿ ಹಲವಾರು ಕಂಪನಿಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.