ಆಕ್ಸಿಜನ್ ಕೊರತೆಯಿಲ್ಲ : ಎಸ್‌ಟಿಎಸ್

ಮೈಸೂರು, ಏ.೨೭- ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳ ಕೊರತೆ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಅವರಿಂದು ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಜೆ.ಎಸ್.ಎಸ್. ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.

ಇವತ್ತಿಗೆ ೨೦೦೦ ರೆಮ್ಡಿಸಿವಿರ್ ಔಷಧ ಬೇಕಾಗಿದೆ. ನೆನ್ನೆ ೩೭೮ ರೆಮ್ಡಿಸಿವಿರ್ ಬಂದಿದೆ. ಇನ್ನೂ ಬೆಕಾಗಿರುವ ಔಷಧ ಪೂರೈಕೆಗೆ ಮಾಹಿತಿ ಕೊಟ್ಟಿದ್ದೇವೆ. ಔಷಧ ಬರುತ್ತಿದೆ ಎಂದರು.

ಜೆ.ಎಸ್.ಎಸ್. ಆಸ್ಪತ್ರೆಯು ಈಗಾಗಲೇ ೪೧೧ ಹಾಸಿಗೆಗಳನ್ನು ಸರ್ಕಾರಕ್ಕೆ ಕೊಟ್ಟಿದೆ. ಇನ್ನೂ ೧೦೦ ಆಕ್ಸಿಜನ್ ಹಾಸಿಗೆಗಳನ್ನು ನೀಡುವಂತೆ ಕೇಳಿದ್ದೇವೆ. ಪೂರಕವಾಗಿ ಸ್ಪಂದಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಶೇಕಡ ೨೦ ರಿಂದ ೫೦ ರಷ್ಟು ಹಾಸಿಗೆಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಸಹಕರಿಸುತ್ತಿದ್ದಾರೆ. ಅಧಿಕ ದರ ವಸೂಲಿ ಮಾಡಲು ಅವಕಾಶ ನೀಡುವುದಿಲ್ಲ. ಹಾಗೇನಾದರೂ ದೂರು ಬಂದರೆ ಶಿಸ್ತು ಕ್ರಮವಹಿಸಲಾಗುವುದು ಎಂದರು.

ಕೆ.ಆರ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದವರಿಗೆಲ್ಲಾ ಆಕ್ಸಿಜನ್ ಬೆಡ್ ಬೇಕಾಗಿಲ್ಲ. ಆದರೆ ಎಲ್ಲರೂ ಆಕ್ಸಿಜನ್ ಬೆಡ್ ನಿರೀಕ್ಷಿಸುತ್ತಿದ್ದಾರೆ. ಆಕ್ಸಿಜನ್ ಹಾಗೂ ಐ.ಸಿ.ಯು. ಬೇಕಾ ಎಂಬುದನ್ನು ವೈದ್ಯರು ತೀರ್ಮಾನಿಸುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್, ಐ.ಸಿ.ಯು. ಒದಗಿಸಲಾಗುವುದು. ಐ.ಸಿ.ಯು ಮತ್ತು ಆಕ್ಸಿಜನ್ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

೧೮ ವರ್ಷ ಮೀರಿದವರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ೨೬೦೦ ಕೋಟಿ ರೂ. ಅನುದಾನ ಒದಗಿಸಿದೆ. ಎಲ್ಲರೂ ಲಸಿಕೆ ಒದಗಿಸಲಾಗುವುದು.ಕೋವಿಡ್ ನಿಯಂತ್ರಣಕ್ಕೆ ೧೪ ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಹಾಗೂ ಅಗತ್ಯ ಕೈಗಾರಿಕಾ, ಸೇವಾ ಚಟುವಟಿಕೆಗೆ ನಿರ್ಬಂಧವಿಲ್ಲ. ಇದಲ್ಲದೆ ಬೆಳಗ್ಗೆ ೬:೦೦ ರಿಂದ ಬೆಳಗ್ಗೆ ೧೦ ಗಂಟೆ ವರೆಗೆ ಅಗತ್ಯ ಆಹಾರ ಮತ್ತು ಅತ್ಯಾವಶ್ಯಕ ವಸ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

೧೪ ದಿನಗಳ ಲಾಕ್ ಡೌನ್‌ಗೆ ಸಹಕಾರ ನೀಡಿದರೆ ಮಾತ್ರ ಈ ಕೊರೊನಾ ಸರಪಳಿಯನ್ನು ಮುರಿಯಲು ಸಾಧ್ಯ ಎಂದು ಈ ಹಿನ್ನೆಲೆಯಲ್ಲಿ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.