ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಸ್ಥಳಕ್ಕೆ ಚವ್ಹಾಣ್ ಭೇಟಿ

ಬೀದರ:ಜೂ.10: ಔರಾದ್ ತಾಲೂಕಿನಲ್ಲಿ ಜೂನ್ 9ರಂದು ಪ್ರವಾಸಕೈಗೊಂಡ ವೇಳೆಯಲ್ಲಿ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸಂತಪೂರ್‍ನಲ್ಲಿ 3.9 ಕೆ.ಎಲ್ ಸಾಮಥ್ರ್ಯದ ಅಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೀದರ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ಡಿಆರ್‍ಡಿಓ ವತಿಯಿಂದ 1,000 ಎಲ್‍ಪಿಎಮ್ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಫೌಂಡೇಶನ್ ಸಹ ಆಗಿದೆ. ಸಂತಪೂರ್‍ನಲ್ಲಿ 3.9 ಕೆ.ಎಲ್ ಸಾಮಥ್ರ್ಯದ ಆಕ್ಸಿಜನ್ ಜನರೇಷನ್ ಪ್ಲಾಂಟ್‍ನ್ನು ಭಾರತ ಎಲೆಕ್ಟ್ರಾನಿಕ್ ಲಿಮಿಟೆಡ್ ನವರಿಂದ ಸ್ಥಾಪಿಸಲಾಗುತ್ತಿದೆ ಎಂದು ಇದೆ ವೇಳೆ ಡಾ.ವಿ.ಜಿ.ರೆಡ್ಡಿ ಅವರು ಸಚಿವರಿಗೆ ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೂನ್ 9ರಂದು ಔರಾದ ಹಾಗೂ ಕಮಲನಗರ ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಪಂಚಾಯಿತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ಮಾಡಲಾಗಿದೆ. ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ. ಜೂನ್ 10ರಂದು 10 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಕೋವಿಡ್ ಸ್ಥಿತಿಗತಿಯ ಪರಿಶೀಲನೆ ನಡೆಸಲಾಗುವುದು. ಔರಾದ್ ತಾಲ್ಲೂಕಿನಲ್ಲಿ ಕೋವಿಡ್‍ನಿಂದ ಮರಣ ಹೊಂದಿರುವವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹಾಗೂ ವೈಯಕ್ತಿಕ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು.