ಆಕ್ಸಿಜನ್ ಅಭಾವ ಪರಿಹಾರಕ್ಕೆ ಕ್ರಮ: ಇ.ಚಂದ್ರಶೇಖರನ್

ಕಾಸರಗೋಡು, ಮೇ ೧೪- ಜಿಲ್ಲೆಯಲ್ಲಿ ಆಕ್ಸಿಜನ್ ಅಭಾವ ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದ್ದು, ಜನರು ಆತಂಕ ಪಡಬೇಕಿಲ್ಲ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು. ಅವರು ಗುರುವಾರ ನಗರದ ಸರಕಾರಿ ಅತಿಥಿ ಗ್ರಹದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಆಕ್ಸಿಜನ್ ಅಭಾವ ಕುರಿತು ಮುಖ್ಯಮಂತ್ರಿ, ಆರೋಗ್ಯ ಸಚಿವೆ, ಜಿಲ್ಲಾಧಿಕಾರಿ ಮೊದಲಾದವರೊಂದಿಗೆ ನಡೆಸಿದ ವಿಚಾರ ವಿನಿಮಯದ ಪರಿಣಾಮ ಕಾಸರಗೋಡು ಜಿಲ್ಲೆಗೆ ವಿವಿಧ ಜಿಲ್ಲೆಗಳಿಂದ ಆಕ್ಸಿಜನ್ ರವಾನೆ ಸಾಧ್ಯವಾಗಿದೆ. ಆಕ್ಸಿಜನ್ ಸಿಲಿಂಡರ್ ಕೊರತೆ, ಆಕ್ಸಿಜನ್ ಬೆಡ್, ವೆಂಟಿಲೇಟರ್ ಕೊರತೆಯನ್ನು ಪರಿಹರಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ೧೬ ಸಾವಿರ ಕ್ಕಿಂತಲೂ ಅಧಿಕ ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಇವರಲ್ಲಿ ಶೇ ೯೫ ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ೬೮೨ ಮಂದಿ ಮಾತ್ರ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರಲ್ಲಿ ಆಕ್ಸಿಜನ್ ಅಗತ್ಯವಿರುವವರ ಸಂಖ್ಯೆ ಕಡಿಮೆ. ಜಿಲ್ಲೆಯಲ್ಲಿ ಪ್ರತಿದಿನ ೩೬೦ ಆಕ್ಸಿಜನ್ ಸಿಲಿಂಡರ್‌ಗಳ ಅಗತ್ಯವಿದೆ. ಇದಕ್ಕಾಗಿ ಅಹಮ್ಮದಾಬಾದ್‌ನಿಂದ ತರಿಸಲು ಆರ್ಡರ್ ಮಾಡಿದ್ದರೂ ಲಭಿಸಲು ೪ ವಾರಗಳು ಅಗತ್ಯ. ಈ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಕ್ಸಿಜನ್ ಚಾಲೆಂಜ್ ನಡೆಸಿದ್ದಾರೆ. ಜಿಲ್ಲಾಧಿಕಾರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ನಡೆಸಿದ ಆಕ್ಸಿಜನ್ ಚಾಲೆಂಜ್ ಮೂಲಕ ೧೫೦ ಸಿಲಿಂಡರ್‌ಗಳು ಕಳೆದ ದಿನ ಲಭಿಸಿವೆ. ಹೆಚ್ಚುವರಿ ೧೫೦ ಸಿಲಿಂಡರ್ ಗಳು ಲಭಿಸಿದರೆ ಅದು ಜಿಲ್ಲೆಗೆ ದೊಡ್ಡ ಸಮಾಧಾನವಾಗಲಿದೆ” ಎಂದು ಸಚಿವರು ತಿಳಿಸಿದರು. ಈ ರೀತಿ ಖರೀದಿಸುವ ಸಿಲಿಂಡರ್ ಗಳು ಸರಕಾರ ಖರೀದಿಸುವ ಸಿಳಿಂಡರ್ ಲಭಿಸಿದ ತಕ್ಷಣ ಮಾಲೀಕರಿಗೆ ಮರಳಿ ನೀಡಲಾಗುವುದು” ಎಂದೂ ಅವರು ನುಡಿದರು. ಜಿಲ್ಲೆಯಲ್ಲಿ ೧೪೭ ಆಕ್ಸಿಜನ್ ಬೆಡ್‌ಗಳು ಇವೆ. ಇವನ್ನು ೧೦೧೬ ಗೆ ಹೆಚ್ಚಿಸುವ ಯತ್ನ ನಡೆದುಬರುತ್ತಿದೆ. ೧೩ ಲಕ್ಷಕ್ಕೂ ಅಧಿಕ ಜನಸಂಖ್ಯೆ ಕಾಸರಗೋಡು ಜಿಲ್ಲೆಯಲ್ಲಿದೆ. ಸದ್ರಿ ಇವರಲ್ಲಿ ಶೇ ೩.೩ ಮಮದಿಗೆ ವಾಕ್ಸಿನೇಷನ್ ನಡೆದಿದೆ. ೫೪ ವೆಂಟಿಲೇಟರ್‌ಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ ೭ ವೆಂಟಿಲೇಟರ್‌ಗಳು ಮಾತ್ರ ರೋಗಿಗಳಿಗೆ ಬಳಕೆಯಾಗುತ್ತಿದೆ” ಎಂದು

ಸಚಿವ ತಿಳಿಸಿದರು. ಜಿಲ್ಲೆಯಲ್ಲಿ ಲಾಕ್‌ಡೌನ್ ಯಶಸ್ವಿಯಾಗಿದೆ ಎಂಬುದು ಸೋಂಕಿತರ ಅಂಕಿ ಅಂಶಗಳಿಂದ ಕಂಡು ಬರುತ್ತಿದೆ. ರಾಜ್ಯದ ಇತರ ಜಿಲ್ಲೆಗಳನ್ನು ಹೋಲಿಸಿದಾಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉಪಸ್ಥಿತರಿದ್ದರು.