ಆಕ್ಸಿಜನ್‌ಗೆ ಹಾಹಾಕಾರ 25 ಮಂದಿ ಸಾವು

ನವದೆಹಲಿ,ಏ.೨೪- ರಾಜಧಾನಿ ನವದೆಹಲಿಯಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿದೆ. ಇದರ ಪರಿಣಾಮ ಕೋವಿಡ್ ಪೀಡಿತರ ಸಾವಿನ ಸರಮಾಲೆ ಮುಂದುವರೆದಿದ್ದು, ಕಳೆದ ರಾತ್ರಿ ೨೫ ಮಂದಿಯನ್ನು ಆಪೋಶನ ತೆಗದುಕೊಂಡಿದೆ.
ನಿನ್ನೆಯಷ್ಟೇ ದೆಹಲಿಯ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದಾಗಿ ೨೫ ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೆ ಗೋಲ್ಡನ್ ಆಸ್ಪತ್ರೆಯಲ್ಲಿ ೨೫ ಜೀವ ಆಮ್ಲಜನಕ ಎಂಬ ಸಂಜೀವಿನಿ ದೊರೆಯದೆ ಸಾವನ್ನಪ್ಪಿದ್ದಾರೆ. ಇದು ದೆಹಲಿಯ ಕೇವಲ ಒಂದೆರೆಡು ಆಸ್ಪತ್ರೆಗಳಲ್ಲಿ ಮಾತ್ರವಲ್ಲ. ಬಹುತೇಕ ಆಸ್ಪತ್ರೆಗಳಲ್ಲಿ ಇಂತಹ ದಯನೀಯ ಸ್ಥಿತಿ ಬಂದೊದಗಿದೆ. ಇದು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ನರಳಾಟ ಹಾಗೂ ಕರುಳು ಹಿಂಡುವ ದೃಶ್ಯಕ್ಕೆ ಸಾಕ್ಷಿಯಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಕೊರತೆಯುಂಟಾಗಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಹಂತ ತಲುಪಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಘನಘೋರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆಸ್ಪತ್ರೆಗಳ ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
೩.೫ ಮೆಟ್ರಿಕ್ ಟನ್ ಆಕ್ಸಿಜನ್ ಸರ್ಕಾರದಿಂದ ನಿಗದಿಯಾಗಿದೆ. ಈ ಆಕ್ಸಿಜನ್ ನಿನ್ನೆ ಸಂಜೆ ೫ ಗಂಟೆಗೆ ಬರಬೇಕಾಗಿತ್ತು. ಆದರೆ, ಇದು ಆಸ್ಪತ್ರೆಗೆ ಬಂದು ತಲುಪಿದ್ದು ಮಧ್ಯರಾತ್ರಿ. ಆ ವೇಳೆಗಾಗಲೇ ೨೦ಮಂದಿ ಸೋಂಕಿತರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಿ.ಕೆ ಬಲೂಜಾ ತಿಳಿಸಿದ್ದಾರೆ.
ಕನಿಷ್ಠ ೨೧೫ ಮಂದಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಬಹುತೇಕ ರೋಗಿಗಳ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಇವರೆಲ್ಲರಿಗೂ ಆಕ್ಸಿಜನ್ ಜರೂರಾಗಿ ಬೇಕಾಗಿದೆ,
ಜೈಪುರದ ಗೋಲ್ಡನ್ ಆಸ್ಪತ್ರೆ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ದೆಹಲಿಯ ೨ನೇ ಆಸ್ಪತ್ರೆಯಾಗಿದೆ. ಈ ಮೊದಲು ಮೂಲ್‌ಚಂದ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಉಲ್ಬಣಗೊಂಡಿತ್ತು, ಈ ಸಂಬಂಧ ಆಸ್ಪತ್ರೆ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ದೆಹಲಿ ರಾಜ್ಯಪಾಲ ಅನಿಲ್ ಬೈಜಾಲ್ ಅವರಿಗೆ ಟ್ವೀಟ್ ಮಾಡಿ ೧೩೦ ಕೋವಿಡ್ ಪೀಡಿತರಿಗೆ ಜೀವ ರಕ್ಷಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೂಡಲೇ ಆಕ್ಸಿಜನ್ ಪೂರೈಸುವಂತೆ ಮನವಿ ಮಾಡಿದ್ದರು.
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಹೊಸ ಕೋವಿಡ್ ಪೀಡಿತರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ವೈದ್ಯಕೀಯ ನಿರ್ದೆಶಕ ಮಧುಹಂಡ ಟ್ವೀಟ್ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯ ಬಹುತೇಕ ಆಸ್ಪತ್ರೆಗಳಿಗೆ ಆಕ್ಸಿಜನ್ ಸರಬರಾಜಾಗುತ್ತಿಲ್ಲ. ಒಂದೆಡೆ ಹಾಸಿಗೆ, ಔಷಧಿಗಳ ಕೊರತೆ ನಡುವೆಯೂ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಕೈ ಮೀರಿ ಹೆಚ್ಚಾಗುತ್ತಿದೆ. ನೆರವು ಒದಗಿಸುವಂತೆ ಸಂಬಂಧಿಕರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆಮ್ಲಜನಕ ಪೂರೈಕೆಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.
ಕಳೆದ ರಾತ್ರಿ ದೆಹಲಿಯೊಂದರಲ್ಲೇ ೩೪೮ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದು ಪ್ರತಿದಿನ ದಾಖಲಾಗುತ್ತಿರುವ ಸಂಖ್ಯೆಯಲ್ಲಿ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ, ದೆಹಲಿಯಲ್ಲಿ ೪ನೇ ಹಂತದ ಕೋವಿಡ್ ಹೊಡೆತಕ್ಕೆ ಅಕ್ಷರಶಃ ನರಳಿದ್ದು, ನಿನ್ನೆ ೨೪,೩೩೧ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ.