ಆಕ್ಷೇಪಾರ್ಹ ಗೋಡೆಬರಹ: ಇಬ್ಬರ ಸೆರೆ

ಮಂಗಳೂರು, ಎ.೨೮- ಪಂಪ್‌ವೆಲ್ ಸಮೀಪದ ಫ್ಲೈಓವರ್‌ನ ಗೋಡೆಯ ಮೇಲೆ ಅಕ್ಷೇಪಾರ್ಹ ಸಾಲುಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರಮುಖ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಎ.೨೦ರಂದು ಪಂಪ್‌ವೆಲ್‌ನ ಫ್ಲೈಓವರ್ ಗೋಡೆಯ ಮೇಲೆ ‘ಲಾಕ್‌ಡೌನ್ ನೀಡೆಡ್’ ಎಂದು ಇಂಗ್ಲಿಷ್‌ನಲ್ಲಿ ಬರೆದ ಬರಹದ ಬಳಿಯೇ ‘ಬ್ಯಾಡ್ ಬಾಯ್ಸ್ ಇನ್ ದ ಸಿಟಿ’ ಮತ್ತದರ ಮೇಲ್ಗಡೆ ‘ಟೆಲ್ ಯುವರ್ ಮಾಮ್ ****’ ಎಂದು ಬರೆಯಲಾಗಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿ ಕ್ಯಾಮರಾದ ಆಧಾರದ ಮೇಲೆ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ‘ಲಾಕ್‌ಡೌನ್ ಆದರೆ ಪರೀಕ್ಷೆಗಳು ಮುಂದೂಡಲ್ಪಡುತ್ತವೆ. ಹಾಗಾಗಿ ಲಾಕ್‌ಡೌನ್ ಬೇಕು ಎಂಬುದಾಗಿ ಬರೆದಿದ್ದೇವೆ’ ಎಂದು ಈ ವಿದ್ಯಾರ್ಥಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಆದಾಗ್ಯೂ ಹೀಗೆ ಗೋಡೆ ಬರಹ ಬರೆಯಲು ಇದೇ ಕಾರಣವೋ ಅಥವಾ ಇದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.