ಆಕ್ಟ್ ೧೯೭೮ ಚಿತ್ರಕ್ಕೆ ಸ್ಯಾಂಡಲ್‌ವುಡ್ ಬೆಂಬಲ


ಬೆಂಗಳೂರು, ನ ೨೦- ಕೊರೊನಾ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ಇಂದು ತೆರೆಕಂಡ ಆಕ್ಟ್ ೧೯೭೮ ಚಿತ್ರಕ್ಕೆ ಇಡೀ ಸ್ಯಾಂಡಲ್ ವುಡ್ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾತಿಚರಾಮಿ ಸಿನಿಮಾದ ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕೊರೋನಾ ಲಾಕ್ಡೌನ್ ಆರಂಭವಾದಾಗಿನಿಂದ ಚಿತ್ರಮಂದಿರಗಳು ಮುಚ್ಚಿದ್ದವು. ಆದರೆ ಚಿತ್ರಗಮಂದಿರಗಳು ಮುಚ್ಚುತ್ತಿದ್ದಂತೆಯೇ ಡಿಜಿಟಲ್ ವೇದಿಕೆಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗಲು ಆರಂಭವಾದವು. ಜನರು ಚಿತ್ರಮಂದಿರಗಳನ್ನು ಮರೆತು ಹೋಗಿದ್ದಾರೆ ಎನ್ನುವ ಮಟ್ಟಿಗೆ ಡಿಜಿಟಲ್ ವೇದಿಕೆಗಳು ಜನರ ಮೇಲೆ ಪರಿಣಾಮ ಬೀರಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಿರುವಾಗಲೇ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಅಂದರೆ ಆರೇಳು ತಿಂಗಳ ನಂತರ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳತ್ತ ತಿರುಗಿ ನೋಡುತ್ತಿಲ್ಲ. ಒಂದು ಶೋಗೆ ೫-೧೦ ಜನ ಇದ್ದರೆ ಹೆಚ್ಚು. ಇದೇ ಕಾರಣದಿಂದ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್ವುಡ್ ನಿರ್ದೇಶಕ ಮಂಸೋರೆ ಹಾಗೂ ಅವರ ತಂಡ ಧೈರ್ಯ ಮಾಡಿ ತಮ್ಮ ಹೊಸ ಸಿನಿಮಾ ಆ?ಯಕ್ಟ್ ೧೯೭೮ ಅನ್ನು ರಿಲೀಸ್ ಮಾಡಿದ್ದಾರೆ.
ಆಕ್ಟ್ ೧೯೭೮ ಸಿನಿಮಾದ ಪೋಸ್ಟರ್ನಿಂದ ಕುತೂಹಲ ಹೆಚ್ಚಿಸಿದ್ದು, ಟ್ರೇಲರ್ನಿಂದ ಅದು ಇಮ್ಮಡಿಯಾಗುವಂತಾಯಿತು. ಇದರಿಂದಾಗಿಯೇ ಈ ಸಿನಿಮಾ ಬಗ್ಗೆ ಚಿತ್ರತಂಡಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದಕ್ಕೆ ಸಿಗಲಿರುವ ಪ್ರತಿಕ್ರಿಯೆಯತ್ತ ಇಡೀ ಸ್ಯಾಂಡಲ್‌ವುಡ್ ಚಿತ್ತವಿದೆ. ಇನ್ನುಈ ಸಿನಿಮಾಗೆ ಬೆಂಬಲವಾಗಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ನಿಂತಿದ್ದು, ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ. ಚಿತ್ರಕ್ಕೆ ಬೆಂಬಲಸಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಸೇರಿದಂತೆ ಅನೇಕ ನಟನಟಿಯರು ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನವೇ ಶುರುಮಾಡಿ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.