ಆಕ್ಟರ್ ಆದ ಸ್ಟಾಕ್ ಬ್ರೋಕರ್ ಪುಟ್ಟಕ್ಕನ ಮಕ್ಕಳು ಪಾತ್ರದಾರಿ ಮುರುಳಿ ಮೇಸ್ಟ್ರು

ಬಣ್ಣದ ಜಗತ್ತೇ ಹಾಗೆ. ಎಲ್ಲೆಲ್ಲೋ  ಇದ್ದವರನ್ನು ಒಂದೆಡೆ ಕರೆತಂದು ಬಣ್ಣದ ಬದುಕಿನಲ್ಲಿ ಕಲಾ ಸರಸ್ವತಿಯ ಸೇವೆ ಸಲ್ಲಿಸುವಂತೆ ಅವಕಾಶ ಮಾಡಿಕೊಡುತ್ತಿದೆ. ಇದೀಗ ಆ ಸಾಲಿಗೆ ಮತ್ತೊಂದು ಪ್ರತಿಭೆ ಪವನ್ ಕುಮಾರ್ ಹೊಸ ಸೇರ್ಪಡೆ.

ಸ್ಟಾಕ್‍ಬ್ರೋಕರ್ ಆಗಿ ಕೆಲಸ ಮಾಡಿಕೊಂಡಿದ್ದ ಪವನ್,ತನ್ನ ಕಛೇರಿ ಬಳಿಯೇ ಇದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ “ಟೆಂಟ್” ಸಿನಿಮಾ ತರಬೇತಿ ಶಾಲೆಯಲ್ಲಿ ನಟನೆ ಕಲಿತು ಆ ನಂತರ “ಶನಿ” ಧಾರಾವಾಹಿಯಿಂದ ನಟನೆ ವೃತ್ತಿ ಆರಂಭಿಸಿದ್ದಾರೆ.  ಜೊತೆ ಜೊತೆಗೆ ಹಲವು ಪ್ಯಾನ್ ಇಂಡಿಯಾ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ,

ಇದೀಗ “ಸ್ಟಾಬ್ರೆರಿ” ಎನ್ನುವ ಸಿನಿಮಾದಲ್ಲಿಯೂ ನಟಿಸಿ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿದ್ದಾರೆ. “ಶನಿ” ಧಾರಾವಾಹಿಯಲ್ಲಿ ಚಂದ್ರನ ಪಾತ್ರಕ್ಕೆ ಬಣ್ಣ ಹಚ್ಚಿ ಆ ಬಳಿಕ “ಕಿನ್ನರಿ” ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಪವನ್ ಕುಮಾರ್  ಜೊತೆ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಮತ್ತೊಂದು ಧಾರಾವಾಹಿಗೆ  ಜೊತೆ ಚರ್ಚೆ ನಡೆಸಿದ್ದರಂತೆ ಅದ್ಯಾಕೇ ಏನೋ ಆರಂಭವಾಗುವುದು ವಿಳಂಬವಾದ ಹಿನ್ನೆಲೆಯಲ್ಲಿ “ ಪುಟ್ಟಕ್ಕನ ಮಕ್ಕಳು” ಧಾರಾವಾಹಿಯಲ್ಲಿ ಮರುಳಿ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿಡಿದ್ದಾರೆ.

ತಮ್ಮ ಕಲಾಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡ ಪವನ್ ಕುಮಾರ್, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನನ್ನದು ಮೇಷ್ಟ್ರು ಪಾತ್ರ. ಮೃಧು ಸ್ವಭಾವ. ತಂದೆ ತಾಯಿಗೆ ಪ್ರೀತಿ ಗೌರವ ಕೊಡುವ ಜೊತೆಗೆ ಪ್ರೀತಿಸಿದ ಹುಡುಗಿಯನ್ನೂ ಗೌರವದಿಂದ ಕಾಣುವ ಪಾತ್ರ. ಧಾರಾವಾಹಿ ಇದುವರೆಗೂ 450 ಎಪಿಸೋಡು ಪ್ರದರ್ಶನ ಕಂಡಿದೆ. ಅದರಲ್ಲಿ  ಬಹುತೇಕ ಎಪಿಸೋಡುಗಳಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ಮಾಹಿತಿ ನೀಡಿದರು.

ಇದರ ಜೊತೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ ಅವರೊಂದಿಗೆ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದೇನೆ. ಈ ಹಾಡನ್ನು ಡಾ.ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಬಣ್ಣದ ಬದುಕಿನಲ್ಲಿ ಮುಂದುವರಿಯುವ ಆಸೆ ಇದೆ, ಇದರ ಜೊತೆಗೆ ನಾನು ಕಲಿತಿರುವ ಹಣಕಾಸಿನ ವಿಷಯದ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶವೂ ಇದೆ. ಈ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡಲಾಗುದು ಎಂದರು.

ಉಮಶ್ರೀ ಅಮ್ಮ ವಿಶ್ವವಿದ್ಯಾಲಯ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿರುವ ಹಿರಿಯ ನಟಿ ಉಮಾಶ್ರೀ ಅವರು ನಟನೆಯಲ್ಲಿ ವಿಶ್ವವಿದ್ಯಾಲಯವಿದ್ದಂತೆ ಅವರ ಬಳಿ ಕಲಿಯುವುದು ಸಾಕಷ್ಟಿದೆ. ಸಣ್ಣ ಪುಟ್ಟ ವಿಷಯಗಳನ್ನು ಹೇಳಿಕೊಡುತ್ತಾರೆ. ಅವರ ಜೊತೆ ಒಂದು ಸಾವಿರ ಎಪಿಸೋಡ್ ಆದರೂ ಅಂತಹ “ ಅಮ್ಮ”ನಿಂದ ಕಲಿಯುವುದು ಸಾಕಷ್ಟಿದೆ. ಅವರ ಜೊತೆ ನಟನೆಗೆ ಅವಕಾಶ ಸಿಕ್ಕಿರುವುದಕ್ಕೆ ನಾನೇ ಅದೃಷ್ಠವಂತ ಎಂದರು ಪವನ್ ಕುಮಾರ್.

ಜೊತೆಗೆ ನಿರ್ಮಾಪಕ, ನಿರ್ದೇಶಕರೂ ಆಗಿರುವ ಆರೂರು ಜಗದೀಶ್ ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರ ಸಹಕಾರದಿಂದ ಕಲಿಕೆಗೆ ಮತ್ತಷ್ಟು ಸಹಕಾರಿಯಾಗಿದೆ ಎನ್ನುತ್ತಾರೆ ಅವರು.

ಸ್ಟ್ರಾ ಬೆರಿಯಲ್ಲಿ ಒಳ್ಳೆಯ ಪಾತ್ರ

ಸ್ಟಾಬೆರ್ರಿ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರದಲ್ಲಿ ಶೃತಿ ಹರಿಹರನ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನನ್ನದೂ ಒಳ್ಳೆಯ ಮತ್ತು ಪ್ರಮುಖ ಪಾತ್ರ ಸಿಕ್ಕಿದೆ ಎಂದು ಹೇಳಿದರು ನಟ ಪವನ್ ಕುಮಾರ್. ವೇಶ್ಯಾವಾಟಿಕೆ ಮತ್ತು ಅದರ ಸುತ್ತ ನಡೆಯುವ ಕಥೆಯ ತಿರುಳನ್ನು ಚಿತ್ರ ಹೊಂದಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಸದ್ಯದಲ್ಲಿಯೇ ಚಿತ್ರ ಬರುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಹಂಚಿಕೊಂಡರು.