
ನ್ಯೂಯಾರ್ಕ್, ಮಾ.೧೪- ಜಾಗತಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಆಕುಸ್ (ಆಸ್ಟ್ರೇಲಿಯಾ, ಅಮೆರಿಕಾ, ಇಂಗ್ಲೆಂಡ್) ನಡುವಿನ ಪರಮಾಣು ಆಧಾರಿತ ಸಬ್‌ಮರಿನ್‌ಗಳ ಯೋಜನೆ ಕೊನೆಗೂ ಅನಾವರಣಗೊಂಡಿದೆ. ಇದರ ಭಾಗವಾಗಿ ಅಮೆರಿಕಾದಿಂದ ಆಸ್ಟ್ರೇಲಿಯಾ ಕನಿಷ್ಠ ಮೂರು ಪರಮಾಣು ಆಧಾರಿತ ಸಬ್‌ಮರಿನ್‌ಗಳನ್ನು ಪಡೆದುಕೊಳ್ಳಲಿದೆ. ಸಹಜವಾಗಿಯೇ ಸದ್ಯದ ಒಪ್ಪಂದ ಚೀನಾದ ಕಣ್ಣು ಕೆಂಪಾಗುವಂತೆ ಮಾಡಿದೆ.
ಅಮೆರಿಕಾದಲ್ಲಿ ಸ್ಯಾನ್‌ಡಿಯಾಗೋದಲ್ಲಿರುವ ಅಮೆರಿಕಾದ ಪ್ರಧಾನ ನೌಕಾ ಕಾರ್ಯಾಲಯದಲ್ಲಿ ನಿನ್ನೆ ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬೇನಿಸ್, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಭಾಗಿಯಾಗಿ, ಆಕುಸ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬ್ರಿಟನ್‌ನಲ್ಲಿ ರೋಲ್ಸ್ ರಾಯ್ಸ್ ಕಂಪೆನಿ ತಯಾರಿಸಿದ ರಿಯಾಕ್ಟರ್‌ಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಜಲಾಂತರ್ಗಾಮಿಗಳನ್ನು (ಸಬ್‌ಮರಿನ್) ನಿರ್ಮಾಣ ಮಾಡಲು ಮೂರೂ ಮಿತ್ರರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲಿದೆ. ಅಲ್ಲದೆ ಈ ಒಪ್ಪಂದವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸುವ ಗುರಿಯನ್ನು ಹೊಂದಿದೆ. ಒಪ್ಪಂದದ ಭಾಗವಾಗಿ ೨೦೩೦ರ ವೇಳೆಗೆ ಆಸ್ಟ್ರೇಲಿಯಾವು ಮೂರು ಅಮೆರಿಕಾ ನಿರ್ಮಿತ ವರ್ಜೀನಿಯಾ ಕ್ಲಾಸ್ ಜಲಾಂತರ್ಗಾಮಿ ನೌಕೆಗಳನ್ನು ಪಡೆದುಕೊಳ್ಳಲಿದೆ. ಆದರೆ ಇದಕ್ಕ ಮುನ್ನ ೨೦೨೭ರಿಂದ ಅಮೆರಿಕಾ ಹಾಗೂ ಬ್ರಿಟನ್ ಪಶ್ಚಿಮ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ನೆಲೆಯನ್ನು ಆರಂಭಿಸಲಿದೆ. ಇನ್ನು ಒಪ್ಪಂದದಲ್ಲಿ ಮತ್ತೆ ಎರಡು ಸಬ್‌ಮರಿನ್‌ಗಳನ್ನು ಖರೀದಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ. ಹಾಗಾಗಿ ಮೂಲಗಳ ಪ್ರಕಾರ ಒಟ್ಟು ಐದು ಸಬ್‌ಮರಿನ್‌ಗಳನ್ನು ಆಸ್ಟ್ರೇಲಿಯಾ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಬಳಿಕ ಒಪ್ಪಂದದ ಮುಂದುವರೆದ ಭಾಗವಾಗಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾ ನೌಕಾ ಪಡೆಗಳಿಗೆ ಸಂಪೂರ್ಣ ಹೊಸ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ಇದನ್ನು ಎಸ್‌ಎಸ್‌ಎನ್-ಆಕುಸ್ ಎಂದು ಕರೆಯಲಾಗಿದೆ. ಎಲ್ಲಾ ಮೂರು ದೇಶಗಳ ತಂತ್ರಜ್ಞಾನವನ್ನು ಬಳಸಿಕೊಂಡು ಜಲಾಂತರ್ಗಾಮಿ ನೌಕೆಗಳನ್ನು, ಬ್ರಿಟನ್ ವಿನ್ಯಾಸದಲ್ಲಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ನಿರ್ಮಾಣ ಮಾಡಲಾಗುವುದು. ಇಂಡೋ-ಫೆಸಿಪಿಕ್‌ನಲ್ಲಿ ಚೀನಾದ ಅಬ್ಬರವನ್ನು ಕಡಿಮೆ ಮಾಡುವ ಸಲುವಾಗಿ ಆಸ್ಟ್ರೇಲಿಯಾ ಇದೀಗ ಕೆಲವೇ ವರ್ಷಗಳಲ್ಲಿ ಪರಮಾಣು ಇಂಧನ ಆಧಾರಿತ ಸಬ್ ಮರಿನ್‌ಗಳನ್ನು ಪಡೆದುಕೊಳ್ಳಲಿದೆ. ಆಕಸ್‌ನ ಈ ಒಪ್ಪಂದದಿಂದ ಸಹಜವಾಗಿಯೇ ಚೀನಾಗೆ ದೊಡ್ಡ ಹಿನ್ನಡೆ ತರಲಿದೆ ಎನ್ನಲಾಗಿದೆ.