ಆಕಾಶ ವೀಕ್ಷಿಸಿದ ಸರ್ಕಾರಿ ಶಾಲೆ ಚಿಣ್ಣರು

ವಿಜಯಪುರ, ಫೆ. ೧೩: ಅನಾದಿಕಾಲದಿಂದಲೂ ಖಗೋಳವೀಕ್ಷಣೆಯು ನಾಗರೀಕ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದಿತು. ಮಾನವರ ಅಗತ್ಯ, ಕಾಲಗೊತ್ತುಮಾಡಿಕೊಳ್ಳಲು, ಕೃಷಿಚಟುವಟಿಕೆ, ವಿವಿಧ ಆಚರಣೆಗಳಿಗೆ ಸಮಯನಿಗದಿ ಮತ್ತಿತರ ವಿಷಯಗಳಿಗೆ ಜನರು ಆಕಾಶ ವೀಕ್ಷಣೆಯನ್ನು ಅವಲಂಬಿಸಿದ್ದರು ಎಂದು ಬೆಂಗಳೂರಿನ ಹವ್ಯಾಸಿ ಖಗೋಳ ಸುಗಮಕಾರ ಕ್ಯಾಪ್ಟನ್ ಪ್ರೀತಮ್‌ಮಧುಕರ್ ತಿಳಿಸಿದರು.
ವಿಜಯಪುರ ಪಟ್ಟಣ ಸಮೀಪದ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರಿನ ಟೀಂ ಸಪ್ನ ಸ್ನೇಹಿತರ ಗುಂಪು,ವಿಜಯಪುರದ ಶ್ರೀ ಶಿವಕುಮಾರಸ್ವಾಮೀಜಿ ಸೇವಾಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆಕಾಶವೀಕ್ಷಣೆ, ಖಗೋಳ ಅಧ್ಯಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೌರಮಂಡಲ, ಆಕಾಶಕಾಯಗಳ ಸ್ಥಾನ ಗುರುತಿಸುವುದು. ನಕ್ಷತ್ರಗಳ ಸ್ಥಾನವನ್ನು ಸೃಜನಾತ್ಮಕವಾಗಿ, ಕಲ್ಪನಾತೀತವಾಗಿ ಗುರುತಿಸಿ ಜ್ಞಾಪಕದಲ್ಲಿಟ್ಟುಕೊಳ್ಳಲು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ನಿಯಮಿತವಾಗಿ ಆಕಾಶವೀಕ್ಷಣೆ ಅಭ್ಯಾಸವಾಗಬೇಕು. ಪ್ರಸ್ತುತ ವಿದ್ಯಾರ್ಥಿದಿಸೆಯಿಂದಲೇ ಪ್ರಶ್ನಿಸುವ, ಸೂಕ್ಷ್ಮವೀಕ್ಷಣೆ ಮಾಡುವ, ವೈಜ್ಞಾನಿಕ ವಿದ್ಯಮಾನಗಳನ್ನು ಅರಿತುಕೊಳ್ಳುವ ಗುಣವನ್ನು ಬೆಳೆಸಬೇಕಿದೆ ಎಂದು ಅವರು ವಿವರಿಸಿದರು.
ಟೀಂಸಪ್ನದ ಸಂಘಟಕಿ ದೀಪಾ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ, ವಿಜ್ಞಾನ, ಭಾಷಾ ವಷಯಗಳಿಗೆ ಸಂಬಂಧಿಸಿದಂತೆ ಕಲಿಕೆಯನ್ನು ಅಭಿವೃದ್ಧಿಪಡಿಸಲು ಟೀ ಸಪ್ನ ಕಾರ್ಯೋನ್ಮುಖವಾಗಿದೆ. ನಿರಂತರವಾಗಿ ಗ್ರಾಮೀಣಭಾಗದಲ್ಲಿ ಆಕಾಶವೀಕ್ಷಣೆ ಹವ್ಯಾಸವನ್ನು ವೃದ್ಧಿಸಲು ಆಕಾಶವೀಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಮಕ್ಕಳಿಗೆ ಪೌರಾಣಿಕ ಕತೆಗಳನ್ನು ಎಣೆದು ನಕ್ಷತ್ರಗಳನ್ನು ಗುರುತಿಸಲು ಹೇಳಿಕೊಡುತ್ತಿದ್ದರು. ಆಧುನಿಕತೆಯ ಸೋಗಿನಲ್ಲಿ, ಸಾಮಾಜಿಕ ಜಾಲತಾಣಗಳು ಮತ್ತು ದೂರದರ್ಶನದ ಪ್ರಭಾವದಿಂದಾಗಿ ಆಕಾಶವೀಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಕಡಿಮೆ ಇದ್ದು ಖಗೋಳದ ಬಗೆಗಿನ ಪ್ರಾಯೋಗಿಕ ಆಸಕ್ತಿಯನ್ನು ಮತ್ತಷ್ಟು ಕೆರಳಿಸಬೇಕಿದೆ ಎಂದರು.
ಟೀಂ ಸಪ್ನಾ ದ ಧರಣೀಶ್, ವಿದ್ಯಾ, ಗುರು, ರಶ್ಮಿ, ವಿಜಯಲಕ್ಷ್ಮಿ, ದಿವ್ಯಾ, ನಾಗರಾಜು, ನೀಲಾಶ್ರೀ, ಕೀರ್ತಿ, ಗಾರ್ಗಿ, ನಿವೃತ್ತ ಶಿಕ್ಷಕ ಬಿ.ನಾಗರಾಜು, ಶಿಕ್ಷಕ ಎ.ಬಿ.ನಾಗರಾಜ, ಮತ್ತಿತರರು ಉಪಸ್ಥಿತರಿದ್ದರು.
ಚಟುವಟಿಕೆಗಳ, ಮಾದರಿಗಳ ಮೂಲಕ ಸೌರವ್ಯೂಹ, ನಕ್ಷತ್ರಪುಂಜ, ರಾಶಿನಕ್ಷತ್ರಗಳ ಬಗ್ಗೆ ವಿವರಿಸಲಾಯಿತು. ಬಿಗ್‌ಬ್ಯಾಂಗ್ ತಿಯರಿ, ಪೌರಾಣಿಕ ಕತೆಗಳೊಂದಿಗೆ ನಕ್ಷತ್ರಗಳಿಗೆ ಇರುವ ಸಂಬಂಧದ ಬಗ್ಗೆ ವಿವರಿಸಲಾಯಿತು. ಪ್ರಾಯೋಗಿಕವಾಗಿ ನಕ್ಷತ್ರ, ನಕ್ಷತ್ರಪುಂಜ, ಖಗೋಳದ ವಿಷಯಗಳನ್ನು ಗುರುತಿಸುವ ರೀತಿಯನ್ನು ಕಲಿಸಿಕೊಡಲಾಯಿತು. ಸರ್ಕಾರಿ, ಖಾಸಗಿ ಹಿರಿಯ ಪ್ರಾಥಮಿಕ, ಪದವಿಪೂರ್ವ, ಪದವಿ ತರಗತಿಗಳಲ್ಲಿ ಕಲಿಯುತ್ತಿರುವ ಸುಮಾರು ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಆಕಾಶವೀಕ್ಷಣೆ ಮಾಡಿ ಖುಷಿಪಟ್ಟರು.
ವಿದ್ಯಾರ್ಥಿನಿ ಎಂ.ಮೇಘನಾ ಮಾತನಾಡಿ, ವಿಜ್ಞಾನದ ಪಾಠಗಳಲ್ಲಿ ಕಲಿತಿದ್ದ ಖಗೋಳದ ವಿಷಯಗಳನ್ನು ಮತ್ತಷ್ಟು ಶಾಶ್ವತವಾಗಿಸಿಕೊಳ್ಲಲು ಇಂದಿನ ಆಕಾಶವೀಕ್ಷಣೆ ಕಾರ್ಯಕ್ರಮವು ವಿಶೇಷವಾಗಿ ಬಹಳ ಅನುಕೂಲವಾಗಿತ್ತು. ಇಂತಹ ಕಾರ್ಯಕ್ರಮಗಳು ನಮಗೆ ಹೆಚ್ಚುಪ್ರಯೋಜನ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಎಂ.ಗಿರಿಜಾಂಬ ರುದ್ರೇಶ್ ಮೂರ್ತಿ ಮಾತನಾಡಿ, ವಿದ್ಯಾರ್ಥಿದಿಸೆಯಿಂದಲೇ ಆಕಾಶವೀಕ್ಷಣೆಯ ಹವ್ಯಾಸವನ್ನು ಬೆಳೆಸುವ ಮೂಲಕ ಸಾಕಷ್ಟು ಮೌಡ್ಯತೆ, ಕಂದಾಚಾರಗಳನ್ನು ಹೋಗಲಾಡಿಸಬಹುದಾಗಿದೆ. ಎಲ್ಲವನ್ನೂ ವೈಜ್ಞಾನಿಕ ಚಿಂತನೆಗೊಳಪಡಿಸಿ ಪ್ರಶ್ನಿಸುವಗುಣವನ್ನು ಮಕ್ಕಳಲ್ಲಿ ಬೆಳೆಸಲು ಸಾಧ್ಯವಿದೆ ಎಂದರು.
ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ, ಎಸ್.ಎಸ್.ರೇಣುಕಾ ಮಾತನಾಡಿ, ಬರೀ ಪುಸ್ತಕದಲ್ಲಿನ ವಿಷಯ, ಚಿತ್ರಗಳ ಮೂಲಕ ಕಲಿತಿದ್ದ ಖಗೋಳ ಅಧ್ಯಯನವನ್ನು ಖುದ್ದು ಆಕಾಶಕಾಯಗಳನ್ನು ಆಕಾಶದ ಕಡೆಗೆ ಮುಖಮಾಡಿ, ಮಲಗಿ ಗುರುತಿಸಿರುವುದು ಹೆಚ್ಚು ಸಂತಸ ತಂದಿದೆ. ಇಂತಹ ವೈಜ್ಞಾನಿಕ ಕಾರ್ಯಕ್ರಮಗಳು ಗ್ರಾಮೀಣಭಾಗದಲ್ಲಿ ನಡೆಯುವಂತೆ ಪ್ರೋತ್ಸಾಹಿಸುತ್ತಿರುವ ಶಾಲೆಯ ಶಿಕ್ಷಕರು, ಸ್ವಯಂಸೇವಾಸಂಸ್ಥೆಗಳಿಗೆ ತುಂಬಾ ಧನ್ಯವಾದಗಳು ಎಂದರು.