ಆಕಾಶ್ ಗಿಂಡಿ ಕೊಲೆ: ಮೂವರು ಆರೋಪಿಗಳ ಸೆರೆ

ಕಲಬುರಗಿ,ಏ.18-ಇದೇ ತಿಂಗಳ 14 ರಂದು ನಗರದ ಜೇವರ್ಗಿ ಕ್ರಾಸ್ (ರಾಷ್ಟ್ರಪತಿ ಚೌಕ್) ಹತ್ತಿರ ನಡೆದ ಅಶೋಕ ನಗರದ ಆಕಾಶ್ ತಂದೆ ಆಂಜನೇಯ ಗಿಂಡಿ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಅಶೋಕನಗರದ ನವೀನ್ ತಂದೆ ಬಸವರಾಜ ಸಿರಸಗಿಕರ್ (22), ಆದರ್ಶ ತಂದೆ ಪ್ರಕಾಶ ಗೋಡಬಲೆ (23) ಮತ್ತು ಡಬರಾಬಾದ್ ಕ್ರಾಸ್ ಲಕ್ಷ್ಮೀ ನಗರದ ಅಂಬ್ರೀಷ್ ತಂದೆ ಸುಭಾಷ ಸಿಂಘೆ (20) ಎಂಬುವವರನ್ನು ಬಂಧಿಸಲಾಗಿದೆ.
ಏ.14 ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಮೆರವಣಿಗೆ ವೇಳೆ ಡಿಜೆಯಲ್ಲಿ ನೃತ್ಯ (ಡ್ಯಾನ್ಸ್) ಮಾಡುವ ವಿಷಯಕ್ಕೆ ಜಗಳ ನಡೆದು ಆಕಾಶ್‍ನನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಈ ಸಂಬಂಧ ಸುನೀತಾ ಗಿಂಡಿ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಪಿಐ ಮಹಾಂತೇಶ ಕೆ.ಬಸಾಪೂರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮೇತ್ರೆ, ವೈಜನಾಥ, ಗುರುಮೂರ್ತಿ, ಶಿವಲಿಂಗ, ನೀಲಕಂಠರಾಯ, ಚಂದ್ರಶೇಖರ ಮತ್ತು ಹರಿಕಿಶೋರ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.