ರಾಯಚೂರು,ಜೂ.೦೮-
ಆಕಾಶವಾಣಿ ರಾಯಚೂರು ಕೇಂದ್ರದಿಂದ ಕಳೆದ ೪೫ ದಿನಗಳಿಂದ ಪ್ರತಿ ದಿನ ಬೆಳಿಗ್ಗೆ ೬.೪೫ಕ್ಕೆ ಪ್ರಸಾರವಾದ ಅರಿವೆಂಬ ಗುರುವಿಗೆ ಶರಣೆಂಬೆ ಶರಣರ ಸತ್ಯಾನುಸಂಧಾನದ ಸರಣಿ ಕಾರ್ಯಕ್ರಮ ಮುಕ್ತಾಯ ಕಾರ್ಯಕ್ರಮ ಜರುಗಿತು.
ನಗರದ ಆಕಾಶವಾಣಿ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅರಿವೆ ಗುರು ಕೃತಿಯನ್ನಾಧರಿಸಿ ಮೂಡಿಬಂದ ಅರಿವೆಂಬ ಗುರುವಿಗೆ ಶರಣೆಂಬೆ ಸರಣಿ ಕಾರ್ಯಕ್ರಮ ಮುಕ್ತಾಯವಾದ ಹಿನ್ನೆಲೆಯಲ್ಲಿ ಭಾಗವಹಿಸಿದ ಕಲಾವಿದರಿಗೆ ಸರಣಿಯ ರಚನೆಕಾರರಾದ ಸುದ್ದಿಮೂಲ ಪತ್ರಿಕೆ ಸಂಪಾದಕರು, ಅನುಭಾವಿಗಳು ಆದ ಬಸವರಾಜ ಸ್ವಾಮಿ ಅವರು ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಬಸವರಾಜ ಸ್ವಾಮಿ ಅವರು, ಆಕಾಶವಾಣಿಯಲ್ಲಿ ತಮ್ಮ ಕೃತಿಯನ್ನು ಕಾರ್ಯಕ್ರಮ ವಾಗಿಸಿಕೊಂಡು ಪ್ರತಿ ದಿನ ಬೆಳಿಗ್ಗೆ ಜನರಿಗೆ ತಲುಪಿಸಿದ್ದು ಖುಷಿಯಾಗಿದೆ ಎಂದರು.
ಸುಖ ದುಃಖಕ್ಕೆ ಬಲಿಯಾಗುವ ನಾವು ಪರಮ ಸುಖ ಎನ್ನುವುದನ್ನು ಆಸ್ವಾಧಿಸುತ್ತಿಲ್ಲ. ಶರಣರ ತತ್ವ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಪುಸ್ತಕದಲ್ಲಿದ್ದರೆ ಅದು ಮಸ್ತಕಕ್ಕೆ ಹೋಗುತ್ತಿತ್ತೊ ಇಲ್ಲವೊ ಗೊತ್ತಿಲ್ಲ. ಪತ್ರಕರ್ತನಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಒಳ್ಳೆಯವನಾಗಲು ಸಾಧ್ಯವಿಲ್ಲ. ತೆಗಳಿಕೆಯನ್ನು ಅರಿವಿನಿಂದ ಸ್ವೀಕರಿಸುವ ಮನೋಭಾವಕ್ಕೆ ಶರಣರ ಅನುಭವ ಮಂಟಪದಲ್ಲಿನ ಸಂವಾದಗಳು ಸಾಕ್ಷಿಕರಿಸಿವೆ ಎಂದು ಹೇಳಿದರು.
ಕಾರ್ಯಕ್ರಮ ಸರಣಿಯಲ್ಲಿ ಬಸವಣ್ಣ ಪಾತ್ರ ನಿರ್ವಹಿಸಿ ನಿರ್ದೇಶಿಸಿದ ನಿಲಯ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಮಾತನಾಡಿ, ಒಂದೊಳ್ಳೆ ಸರಣಿಯನ್ನು ಪ್ರಸಾರ ಮಾಡಿದ ಸಂತಸ ನಮ್ಮೆಲ್ಲರಿಗಿದ್ದು ಅದರ ಶ್ರೇಯಸ್ಸು ರಚನೆಕಾರ ಬಸವರಾಜ ಸ್ವಾಮಿಯವರಿಗೆ, ಭಾಗವಹಿಸಿದ ಉದ್ಘೋಷಕರಿಗೆ ಮತ್ತು ಕೇಳುಗರಿಗೆ ಸಲ್ಲುತ್ತದೆ ಎಂದರು.
ಶರಣರು ಬದುಕಿನ ಅನೇಕ ವೌಲ್ಯಗಳನ್ನು ಬಿತ್ತಿದ್ದು ಅವುಗಳ ಅನುಸರಿಸುವ ಮತ್ತು ಇಂದಿನ ಪ್ರಸ್ತುತತೆ ಅರಿತು ಪ್ರಸಾರ ಮಾಡಿದ್ದು ಅನೇಕ ಜನರ ಪ್ರತಿಕ್ರಿಯೆ ಕೇಳಿ ಸಾರ್ಥಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ನಿರ್ವಾಹಕರಾದ ಡಾ.ವಿ.ಜಿ.ಬಾವಲತ್ತಿ, ರಂಗಭೂಮಿ ಕಲಾವಿದ ರಾಜಗೋಪಾಲ ಚಿಕ್ಕಸೂಗೂರು, ಬಿ.ವೆಂಕಟ ಸಿಂಗ್ ವಿವಿಧ ಪಾತ್ರಗಳ ನಿರ್ವಹಿಸಿದ ರಮಾಕುಲಕರ್ಣಿ, ಅಮರೇಶ ಅಶಿಹಾಳ, ಶ್ರೀದೇವಿ, ವೆಂಕಟೇಶ ಹೂಗಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸುದ್ದಿಮೂಲ, ಬಸವಸೇವಾ ಪ್ರತಿಷ್ಟಾನದಿಂದ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ, ಹಿರಿಯ ಸಾಹಿತಿ ಬಿ.ಜಿ.ಹುಲಿ, ವಿಶ್ವನಾಥ ಬಿ.ಸ್ವಾಮಿ, ಸಂಗಮೇಶ, ವೀರೇಶ ಯರಗೇರಾ, ಶ್ರೀನಿವಾಸ ಕುಲಕರ್ಣಿ, ಸಮತಾ, ವಿಜಯಶ್ರೀ ಸೇರಿ ಇತರರಿದ್ದರು.