ಆಕಸ್ಮಿಕ ಬೆಂಕಿ: ಮನೆ ಬೆಂಕಿಗಾಹುತಿ

ನಾಗಮಂಗಲ: ಏ.14:- ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ವಾಸದ ಹೆಂಚಿನ ಮನೆಯೊಂದು ಸುಟ್ಟುಹೋಗಿರುವ ಘಟನೆ ತಾಲೂಕಿನ ಪಡುವಲಪಟ್ಟಣ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಗ್ರಾಮದ ಕಾನನ ಬ್ರಹ್ಮದೇವಸ್ಥಾನದ ಅರ್ಚಕ ಶಿವರಾಂ ಎಂಬುವರ ಮನೆಯೇ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರು.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗುರುವಾರ ಸಂಜೆ 5 ಗಂಟೆ ವೇಳೆಗೆ ಗ್ರಾಮದ ಮಧ್ಯಭಾಗದಲ್ಲಿದ್ದ ಶಿವರಾಂ ಅವರ ಮನೆಯ ಹಟ್ಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮನೆಯವರು ಬೆಂಕಿ ಆರಿಸುವಂತೆ ಅಕ್ಕಪಕ್ಕದ ಮನೆಯವರನ್ನು ಕೂಗಿಕೊಂಡಿದ್ದಾರೆ. ಗ್ರಾಮಸ್ಥರು ಅಗಮಿಸುವ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆ ಮನೆಯ ಮೇಲ್ಚಾವಣಿಯನ್ನು ಪೂರ್ಣಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ.
ಸುದ್ದಿ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಮನೆಯು ಭಾಗಶಃ ಸುಟ್ಟುಹೋಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಅಕ್ಕಪಕ್ಕದ ಮನೆಗಳಿಗೆ ಆಗಬಹುದಾದ ಭಾರೀ ಅನಾಹುವನ್ನು ತಪ್ಪಿಸಿದರು. ಮನೆಯ ಹಟ್ಟದ ಮೇಲೆ ಇದ್ದ ಸಾವಿರಾರು ತೆಂಗಿನ ಕಾಯಿಗಳು ಸುಟ್ಟು ಭಸ್ಮವಾಗಿವೆ. ಮನೆಯಲ್ಲಿ ದಾಸ್ತಾನಿಟ್ಟಿದ್ದ ಐದಾರು ಕ್ವಿಂಟಾಲ್ ರಾಗಿ ಸೇರಿದಂತೆ ದವಸ ಧಾನ್ಯ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮನೆ ಕಳೆದುಕೊಂಡಿರುವ ಶಿವರಾಂ ಕುಟುಂಬದವರು ವಾಸಿಸಲು ಮನೆಯಿಲ್ಲದೆ ಕಂಗಾಲಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಲಕ್ಷಾಂತರ ರು.ಗಳ ನಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.