ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ

ಕೆ.ಆರ್.ಪೇಟೆ.ಅ.26: ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಟಿಂಬರ್ ಮತ್ತು ವುಡ್ ಪ್ಲೈನಿಂಗ್ ಮಳಿಗೆಯಲ್ಲಿ ಎಲೆಕ್ಟ್ರಿಕಲ್ ಶಾರ್ಟ್ ಸಕ್ರ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಮುಟ್ಟುಗಳು ಪ್ಲೈವುಡ್ ಶೀಟುಗಳು ಹಾಗೂ ಯಂತ್ರೋಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ತಡರಾತ್ರಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ಗಂಗಾಧರ ಎಂಬುವವರು ನೂತನವಾಗಿ ಶ್ರೀ ಅನ್ನಪೂರ್ಣೇಶ್ವರಿ ಟಿಂಬರ್ ಮತ್ತು ಉಡ್ ಫ್ಲೈನಿಂಗ್ ವಕ್ರ್ಸ್ ಅಂಗಡಿ ಪ್ರಾರಂಭಿಸಿದ್ದರು ತಡರಾತ್ರಿ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಅಂಗಡಿಯ ಪಕ್ಕದ ಮನೆಯವರು ಅಗ್ನಿಅವಘಡ ಸಂಭವಿಸಿ ಬೆಂಕಿ ಹತ್ತಿಕೊಂಡು ಹೊಗೆಬರುತ್ತಿರುವ ಬಗ್ಗೆ ಮಾಲೀಕ ಗಂಗಾಧರ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಅಂಗಡಿ ಬಳಿ ಬಂದು ಬಾಗಿಲು ತೆಗೆದಾಗ ಬೆಂಕಿಯ ಕೆನ್ನಾಲಿಗೆಯು ಸಂಪೂರ್ಣವಾಗಿ ಆವರಿಸಿತ್ತು.
ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ
ನಿನ್ನೆಯಷ್ಟೇ ಆಯುಧಪೂಜೆ ಮಾಡಿ ಅಂಗಡಿಯಲ್ಲಿ ಬಂಧುಗಳು ಹಾಗೂ ಸ್ನೇಹಿತರಿಗೆ ಸಿಹಿವಿತರಿಸಿ ಮನೆಗೆ ತೆರಳಿದ್ದಾರೆ ಆದರೆ ಮಧ್ಯರಾತ್ರಿ ಬೆಂಕಿ ಬಿದ್ದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ.