ಆಕಸ್ಮಿಕ ಬೆಂಕಿ ತಗುಲಿ ಜೋಳದ ರಾಶಿ ನಾಶ


ಬ್ಯಾಡಗಿ,ನ.11- ತಾಲೂಕಿನ ಮಾಸಣಗಿ ಗ್ರಾಮದ ಮಂಜಪ್ಪ ಬನ್ನಿಹಟ್ಟಿ ಅವರ ಹೊಲದಲ್ಲಿ ಸಂಗ್ರಹಿಸಿಡಲಾಗಿದ್ದ ಗೋವಿನ ಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಮಂಗಳವಾರ ಜರುಗಿದೆ.
ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋವಿನಜೋಳದ ರಾಶಿಯನ್ನು ಅಲ್ಲಿಯೇ ಸಂಗ್ರಹಿಸಿಡಲಾಗಿತ್ತು, ಆದರೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ಒಂದೂವರೆ ಲಕ್ಷ ರೂಗಳ ಹಾನಿ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಗೋವಿನ ಜೋಳದ ರಾಶಿ ಬೆಂಕಿಗೆ ಆಹುತಿ ಯಾಗುವ ಮೂಲಕ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಗೋವಿನಜೋಳದ ರಾಶಿ ಸುಟ್ಟಿರುವ ಸ್ಥಳಕ್ಕೆ ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯ ಶಿವಪ್ಪ ಕುಮ್ಮೂರ, ಮುನ್ನಾ ಮಾಳಗಿಮನಿ, ನಾಗರಾಜ ಕೊರ್ಲಿ, ಈರಣ್ಣ ಮನೆಹಳ್ಳಿಮಠ, ಗ್ರಾಮ ಲೆಕ್ಕಾಧಿಕಾರಿ ಶಬ್ಬೀರ ಬಾಗೇವಾಡಿ ಪರಿಶೀಲನೆ ನಡೆಸಿದರು.