ಆಕಳು ಸಗಣಿಯಿಂದ ಭೂಮಿಗೆ ಪೋಷಕಾಂಶ ಪೂರೈಕೆ: ಕನಕಗಿರಿ ಸೀಮೆ ಆಕಳುಗಳಿಗೆ ಡಿಮ್ಯಾಂಡ್”


ಸಿ.ಶಿವರಾಮ,ಸಿರಿಗೇರಿ
ಸಿರಿಗೇರಿ ಜು 8. ರೈತರು ತಮ್ಮ ಜಮೀನಿನಲ್ಲಿ ಸಾವಯವ ಪೋಷಕಾಂಶ ಹೆಚ್ಚಿಸಿಕೊಳ್ಳಲು ಆಕಳು ಸಗಣಿಗೆ ಮೊರೆಹೋಗುತ್ತಿದ್ದು, ಕನಕಗಿರಿ ಮೂಲದಿಂದ ಬರುವ ಸೀಮೆ ಅಕಳು ಜಾನುವಾರುಗಳನ್ನು ತಮ್ಮ ಜಮೀನಿನಲ್ಲಿ ತರಬುತ್ತಿದ್ದಾರೆ. ನೂರಾರು ಆಕಳುಗಳ ಗುಂಪನ್ನು ತಮ್ಮ ಜಮೀನಿನಲ್ಲಿ 3, 4 ದಿನಗಳವರೆಗೆ ತಬ್ಬುವದರಿಂದ ಜಮೀನಿಗೆ ಅಗತ್ಯವಾದ ಸಾವಯವ ಗೊಬ್ಬರದ ಪೂರೈಕೆಗೆ ಪ್ರಯತ್ನಗಳು ರೈತರಿಂದ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಮೂಲದ ಗ್ರಾಮಗಳ ಸೀಮೆ ಆಕಳು ಪಾಲನೆ ಮಾಡಿಕೊಂಡ ರೈತರು ಬೇಸಿಗೆಯಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳ ರೈತರ ಜಮೀನುಗಳಲ್ಲಿ ಆಕಳು ತರುಬಲು ಗುಳೆ ಬರುತ್ತಾರೆ. ಮಳೆಗಾಲ ಬಂದು ಈ ಭಾಗದಲ್ಲಿ ಬಿತ್ತನೆ ಪ್ರಾರಂಭಗೊಂಡ ನಂತರ ತಮ್ಮ ಸ್ವಗ್ರಾಮಗಳಿಗೆ ತೆರಳುವುದು ಕೆಲವರ್ಷಗಳಿಂದ ವಾಡಿಕೆಯಾಗಿದೆ.
ರೈತರ ಚಿತ್ತ ಪೋಷಕಾಂಶ ಹೆಚ್ಚಿಸುವತ್ತ: ಕಳೆದ ಹತ್ತಾರು ವರ್ಷಗಳಿಂದ ತಮ್ಮ ಜಮೀನುಗಳಲ್ಲಿ ಹೆಚ್ಚಿನ ಲಾಭ ಕೊಡುವ ಮೆಣಸಿನಕಾಯಿ, ಹತ್ತಿ, ಮತ್ತು ತೋಟಗಾರಿಕೆಯ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಬೆಳೆಗಳ ರಕ್ಷಣೆಗೆ ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪರಣೆಯಿಂದಾಗಿ ಭೂಮಿಯುಲ್ಲಿನ ಮಣ್ಣಿನ ಸತ್ವ ಕಡಿಮೆಯಾಗಿ ಬೆಳೆಗಳಿಗೆ ಅವಶ್ಯವಾದ ಪೋಷಕಾಂಶಗಳ ಕೊರತೆಯಾಗಿದೆ. ಕಳೆದೆರಡು ವರ್ಷಗಳಿಂದ ಬೆಳೆಗಳು ಅತಿಯಾಗಿ ರೋಗಕ್ಕೆ ಗುರಿಯಾಗುವುದು, ಇಳುವರಿ ಕುಂಟಿತಗೊಳ್ಳುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ತಮ್ಮ ಜಮೀನುಗಳಲ್ಲಿ ಪೋಷಕಾಂಶ ಹೆಚ್ಚಿಸಲು ಕುರಿ, ಆಕಳು ಜಾನುವಾರು ತಬ್ಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕುರಿ, ಸೀಮೆ ಅಕಳುಗಳಿಗೆ ಡಿಮ್ಯಾಂಡ್: ಪ್ರಾರಂಭದಲ್ಲಿ ಒಂದು ರೀತಿಯಾಗಿ ಜಮೀನಗಳಲ್ಲಿ ಕುರಿ ದನಗಳನ್ನು ರಾತ್ರಿಹೊತ್ತು ನೆಲೆ ಹೊಂದಲು ಜಾಗ ನೀಡಿದರೆ ಸಾಕು, ಅವರು ಕೊಟ್ಟಷ್ಟು ಹಣ ಕೊಡಲಿ ಎನ್ನುವ ಹಂತವು ಈಗ ಕುರಿ ಒಂದಕ್ಕೆ 1ರೂ. ನಂತೆ ಅಂದಾಜು 2, 3 ಗುಂಪಿನಲ್ಲಿ 1000 ಕುರಿಗಳಿದ್ದರೆ, ದಿನಕ್ಕೆ 1ಸಾವಿರ ರೂ. ರೈತರು ಕೊಡಬೇಕಾಗಿದೆ. ಆಕಳು ತಬ್ಬಲು ಆಕಳಿಗೆ 2ರೂ. ಇದ್ದ ಬೆಲೆ ಈಗ ಒಂದು ಆಕಳಿಗೆ 5 ರಿಂದ 6ರೂ. ಗೆ ಏರಿಕೆಯಾಗಿದೆ, 300 ಆಕಳಿಗೆ ಒಂದು ದಿನಕ್ಕೆ 1500 ರೂ. ನಿಂದ 2000 ರೂ. ಕೊಡಬೇಕು ಎಂದು ರೈತರು ಮಾಹಿತಿ ನೀಡುತ್ತಿದ್ದಾರೆ.
     ಬಾಕ್ಸ್‍ನಲ್ಲಿ:- ಕುರಿಯ ಗಂಜಲು (ಉಚ್ಚೆ) ಹೆಚ್ಚಿನ ಘಾಟು ಇದ್ದು ಭೂಮಿಗೆ ಹೆಚ್ಚಿನ ಪೋಷಕಾಂಶ ಕುರಿ ಗಂಜಲು ಮತ್ತು ಗೊಬ್ಬರದಿಂದ ಸಿಗುತ್ತದೆ. ಆಕಳು ಸಗಣಿಯಲ್ಲಿ ನ್ಯೂಟ್ರೀಷಿಯನ್ಸ್ ಹೆಚ್ಚು ಇದ್ದು, ಬೆಳೆಗೆ ಅಗತ್ಯವಿರುವ ಸಾರಜನಕ, ರಂಜಕ, ಪೊಟಾಷ್, ಜಿಂಕ್, ಬೋರಾನ್, ಮಾಲಿಡಿನಂ, ಕಬ್ಬಿಣ, ಮ್ಯಾಂಗನೀಸ್ ರೀತಿಯ 16 ಜೀವಸತ್ವಗಳು ಭೂಮಿಗೆ ಲಭ್ಯವಾಗುತ್ತವೆ. ಕುರಿ, ದನ, ಜಾನುವಾರುಗಳ ತಬ್ಬುವ ಕೆಲಸವನ್ನು ಬಿತ್ತನೆಗೆ 3, 4 ವಾರಗಳ ಮುಂಚೆಯೇ ಮಾಡಿರಬೇಕು, ಒಂದನೇ ಬೆಳೆಗಿಂತ 2ನೇ ಬೆಳೆಗೆ ಇದರ ಫಲಿತಾಂಶ ನೋಡಬಹುದು:- ಹೇಮ್ಲಾನಾಯಕ್, ಕೃಷಿ ಅಧಿಕಾರಿ ತೆಕ್ಕಲಕೋಟೆ ವಿಭಾಗ.