
ಕಲಬುರಗಿ:ಸೆ.10:ಕಲಿಕೆ ನಿತ್ಯ, ನಿರಂತರ. ಶಿಕ್ಷಕರಿಗೆ ಹೊಸ ಕಲಿಕೆಯ ಆಸಕ್ತಿ, ತಾರ್ಕಿಕ ಚಿಂತನೆ, ಸಂಶೋಧನಾ ಗುಣ ಅಗತ್ಯ ಎಂದು ಉಪನ್ಯಾಸಕ ಹಾಗೂ ಸಂಪನ್ಮೂಲ ವ್ಯಕ್ತಿ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಅವರು ಜೇವರ್ಗಿ ನಗರದ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬಿ.ಎಡ್. ದ್ವಿತೀಯ ಸೆಮಿಸ್ಟರನ ಪ್ರಶಿಕ್ಷಣಾರ್ಥಿಗಳ ರೂಢಿ ಪಾಠ ವೀಕ್ಷಕರಾಗಿ ಮಹಾಲಕ್ಷ್ಮೀ ಪ್ರೌಢ ಶಾಲೆಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲೂ ಶಿಕ್ಷಕರನ್ನು ಅನುಕರಣೆ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಾರೊ ಅದೆಲ್ಲಾ ಗುಣಗಳನ್ನು ತಾವು ಸಹ ಅನುಸರಿಸಬೇಕಾಗುತ್ತದೆ. ಕಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಬೇಕು. ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುವ ಹೊಸ ಬದಲಾವಣೆಗಳನ್ನು ಅರಿತು ಅಳವಡಿಸಿಕೊಂಡರೆ ತರಗತಿಯ ಕೋಣೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅರಳುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಆ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶ ವಿದೇಶಗಳ ಹೊಸ ಕಲಿಕಾ ಪದ್ದತಿಗಳ ಕುರಿತು ವಿವರಿಸಿದ ಸಂಪನ್ಮೂಲ ವ್ಯಕ್ತಿ ದೇವಿಂದ್ರ ವಿಶ್ವಕರ್ಮ ಅವರು, ಶಿಕ್ಷಕರಿಗೆ ಕಲಿಕಾ ಪದ್ದತಿಗಳಲ್ಲಿ ಇರುವ ಮಿಥ್ಯಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಇರಬೇಕು. ವಿದ್ಯಾರ್ಥಿಗಳ ಮನಸ್ಸನ್ನು ಚಂಚಲಗೊಳಿಸಿ ವಶಪಡಿಸಿಕೊಳ್ಳಲು ಹವಣಿಸುವ ಹೊರಜಗತ್ತಿನ ಅನೇಕ ಆಕರ್ಷಣೆಗಳ ನಡುವೆ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟು ಬೋಧಿಸುವುದು ಒಂದು ಸವಾಲಿನ ಕಾರ್ಯವೇ ಸರಿ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು ತಯಾರಿಸಿದ ಚಿತ್ರಪಟಗಳು, ಬೋಧನೆಯೂ ಕೂಡ ರಚನಾತ್ಮಕ ಮತ್ತು ಕಲಾತ್ಮಕವಾಗಿ ಆಕರ್ಷಿಸುವಂತಿರಬೇಕು ಎಂದು ಹೇಳಿ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಚಿತ್ರಪಟಗಳು, ಭೂಪಟಗಳು ವಿಕ್ಷೀಸಿದರು. ಪ್ರಶಿಕ್ಷಣಾರ್ಥಿ ಐಶು ಎಮ್ ತಯಾರಿಸದ ಅಮೀಬಾ ಮತ್ತು ಪ್ರಾಣಿ ಜೀವಕೋಶ ಚಿತ್ರಪಟಗಳು ಪ್ರಮುಖ ಆಕರ್ಷಣೀಯವಾಗಿದ್ದವು. ಪ್ರಶಿಕ್ಷಣಾರ್ಥಿಗಳ ಪ್ರಶ್ನೆ ಆಲಿಸಿ ವಿವಿಧ ಸಲಹೆಗಳನ್ನು ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕಿಯರಾದ ಅಶ್ವಿನಿ, ಶಿವಾನಿ, ಭಾಗ್ಯಶ್ರೀ ವಾಯ್, ತಾಯಮ್ಮ, ಐಶು ಎಮ್, ಭಾಗ್ಯಶ್ರೀ ಪಾಟೀಲ್, ಶರಣಮ್ಮ, ಮೆಹಜಬಿನ್, ರೇಷ್ಮಾ, ರೇಣುಕಾ, ಶಿಕ್ಷಕರಾದ ಶರಣಗೌಡ, ಶಿವರಾಜ್, ಮಹಾಂತೇಶ ಸೇರಿ ಮುಂತಾದವರು ಹಾಜರಿದ್ದರು.