ಆಕರ್ಷಕವಾಗಿ ನಡೆದ ಚೆಲುವನಾರಾಯಣಸ್ವಾಮಿಯ ತೆಪ್ಪೋತ್ಸವ

ಮೇಲುಕೋಟೆ : ಏ.06:- ದಕ್ಷಿಣಭಾರತದ ಅತಿದೊಡ್ಡ ಪಂಚಕಲ್ಯಾಣಿಯಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರದ ಮೆರಗಿನೊಂದಿಗೆ ಬುಧವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ತೆಪ್ಪೋತ್ಸವ ನೆರವೇರಿತು.
ವೈರಮುಡಿ ಬ್ರಹ್ಮೋತ್ಸವದ ಪಂಗುನ್ಯುತ್ತರಮ್ ನಿಮಿತ್ತ ತೆಪ್ಪೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಮೈಸೂರು ಅರಸರಾದ ರಾಜಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿಕಿರೀಟಧರಿಸಿದ ಚೆಲುವನಾರಾಯಣಸ್ವಾಮಿಯನ್ನು ಕಲ್ಯಾಣಿಯಲ್ಲಿ ನಿರ್ಮಿಸಿದ ತೆಪ್ಪಮಂಟಪದಲ್ಲಿ ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದ ನೀನಾದದಲ್ಲಿ ತೆಪ್ಪೋತ್ಸವ ಮೂರು ಪ್ರದಕ್ಷಿಣೆಹಾಕಿತು.
ಮಂಡ್ಯಜಿಲ್ಲಾಧಿಕಾರಿ ಡಾ.ಹೆಚ್.ಎನ್‍ಗೋಪಾಲಕೃಷ್ಣ, ಅಪರಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ತಹಶೀಲ್ದಾರ್ ಸೌಮ್ಯ, ದೇವಾಲಯದ ಇಒಮಹೇಶ್ ಸೇರಿದಂತೆ ಹಲವು ಗಣ್ಯರು ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದರು.
ಕಲ್ಯಾಣಿಯ ನಾಲ್ಕೂ ಕಡೆಯ ಸೋಪಾನಗಳಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರು ಚೆಲುವನಾರಾಯಣನ ತೆಪ್ಪೋತ್ಸವದ ಸೊಬಗನ್ನು ದರ್ಶನಮಾಡಿ ಪುನೀತರಾದರು. ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣಿಸಮುಚ್ಚಯದ ಸಾಲುಮಂಟಪಗಳು, ಭವ್ಯಸ್ಮಾರಕ ಭುವನೇಶ್ವರಿಮಂಟಪ, ಧಾರಾಮಂಟಪ ಹಾಗು ಬಳೆಮಂಟಪಗಳಿಗೆ ಆಕರ್ಷಕವಾದ ವಿದ್ಯುದ್ಧೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಇತಿಹಾಸ ಬಿಂಭಿಸುವ ಲೇಸರ್ ಷೂ ಭಕ್ತರ ಮನಸೆಳೆಯಿತು.
ಕಳೆದ ಸಲ ಏರ್ಪಡಿಸಿದ್ದ ಇವೆಂಟ್ ಮಾದರಿಯ ಕಾರ್ಯಕ್ರಮಗಳನ್ನು ಈ ಸಲ ರದ್ದುಮಾಡಿ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ವೈಭವವನ್ನು ಕಣ್ತುಂಬಿಕ್ಕೊಳ್ಳಲು ಭಕ್ತರಿಗೆ ಜಿಲ್ಲಾಡಳಿತ ಅವಕಾಶಮಾಡಿತ್ತು ಸ್ಥಾನೀಕರು, ಅರ್ಚಕರು, ಭಕ್ತರ ಸಲಹೆಗೆ ಮನ್ನಣೆ ನೀಡಿದ ಜಿಲ್ಲಾಧಿಕಾರಿ ಮತ್ತು ಅಪರಜಿಲ್ಲಾಧಿಕಾರಿಗಳು ಸಂಪ್ರದಾಯಬದ್ಧ ಉತ್ಸವಗಳ ನಡುವೆ ಅನಗತ್ಯ ಕಾರ್ಯಕ್ರಮಗಳ ಸೇರ್ಪಡೆ ಮಾಡದೆ ತೆಪ್ಪೋತ್ಸವ ನಡೆಸುವುದಾಗಿ ತಿಳಿಸಿದಂತೆ ಮಹೋತ್ಸವ ನಡೆಸಲಾಯಿತು. ತೆಪ್ಪೋತ್ಸವ ನಡೆದ ನಂತರ ರಾತ್ರಿ ಡೋಲೋತ್ಸವ, ಕುದುರೆವಾಹನೋತ್ಸವ, ಕಳ್ಳಸುಲಿಗೆ ಉತ್ಸವ ನೆರವೇರಿತು. ಏ.6ರ ಬೆಳಿಗ್ಗೆ 6 ಗಂಟೆಗೆ ಸಂಧಾನಸೇವೆ ನಡೆಯಲಿದೆ.