ಆಂಬ್ಯುಲೆನ್ಸ್‌ಗೆ ಸರ್ಕಾರ ದರ ನಿಗದಿ


ಬೆಂಗಳೂರು,ಮೇ. ೨೧- ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ರೋಗಿಗಳಿಂದ ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದ ಆಂಬ್ಯುಲೆನ್ಸ್ ಲೂಟಿಗೆ ಸರ್ಕಾರ ಕಡಿವಾಣ ಹಾಕಿದೆ.
ಪ್ರತಿ ಕಿಲೋಮಿಟರ್ ಗೆ ದರ ನಿಗದಿ ಪಡಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಹೊಸ ದರದಂತೆ ಹಣ ಪಡೆಯಲು ಖಡಕ್ ಸೂಚನೆ ನೀಡಿದೆ. ಒಂದು ವೇಳೆ ಈ ನಿಯಮ ಮೀರಿದರೆ ಪರವಾನಗಿ ಕೂಡ ರದ್ದು ಪಡಿಸುವ ಎಚ್ಚರಿಕೆ ನೀಡಿದೆ.
ಕೊರೊನಾ ಸೋಂಕಿತರ ಕುಟುಂಬ ಮತ್ತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಸಚಿವರೂ ಆಗಿರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು, ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ
ಇನ್ನು ಮುಂದೆ ಆಂಬ್ಯುಲೆನ್ಸ್ ಗಳ ೧೦ ಕಿಲೋಮಿಟ್ ವರೆಗೆ ೧,೫೦೦ ರೂಪಾಯಿ ದರ ನಿಗದಿ ಮಾಡಿದೆ. ೧೦ ಕಿಲೋಮೀಟರ್ ನಂತರ ೧೨೦ ದರ ನಿಗದಿ ಮಾಡಿದೆ. ಅಲ್ಲದೇ ವೈಟಿಂಗ್ ಚಾರ್ಜ್ ಆಗಿ ಪ್ರತಿ ಗಂಟೆಗೆ ರೂ.೨೦೦ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಲೈಫ್ ಸಪೋರ್ಟ್ ಹೊಂದಿರುವ ಆಂಬ್ಯುಲೆನ್ಸ್ ಗಳಿಗೆ ೧೦ ಕಿಲೋಮೀಟರ್ ಗೆ ೨೦೦೦ ರೂಪಾಯಿ ದರ ನಿಗದಿ ಮಾಡಿದೆ. ೧೦ ಕಿಲೋಮೀಟರ್ ನಂತರ ೧೨೦ ರೂಪಾಯಿಯ ದರವನ್ನು ನಿಗದಿ ಮಾಡಿದೆ. ಅಲ್ಲದೇ ಪ್ರತಿ ಗಂಟೆಗೆ ಕಾಯುವಿಕೆಯ ಚಾರ್ಜ್ ಆಗಿ ರೂ.೨೫೦ ದರ ನಿಗದಿ ಪಡಿಸಿ, ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿ, ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಹೆಚ್ಚಿನ ಪ್ರಕರಣಗಳ ಸಂದರ್ಭದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತೊಡಗಿರುವ ಆಂಬ್ಯುಲೆನ್ಸ್ ಗಳು, ಸೋಂಕಿತರ ಕುಟುಂಬಸ್ಥರಿಂದ ಹಣದ ಸುಲಿಗೆಯನ್ನೇ ಮಾಡುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಗಳ ಹಣ ಮಾಡೋ ದಂಧೆಗೆ ಬ್ರೇಕ್ ಹಾಕುವಂತೆಯೂ ಸಾರಿಗೆ ಇಲಾಖೆ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.