ಬೆಂಗಳೂರು,ಮಾ.೬- ಚಿತ್ರನಟ ಡಾ.ಪುನೀತ್ ರಾಜಕುಮಾರ್ ಆಶಯಕ್ಕೆ ಪೂರಕವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ “ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ “ ಅನ್ನು ಚಿತ್ರ ನಟ ಪ್ರಕಾಶ್ ರೈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಪ್ರಕಾಶ್ ರಾಜ್ ಫೌಂಡೇಶನ್ ಈ ಕನಸಿಗೆ ಜೊತೆಯಾಗಿ ಮೆಘಾ ಸ್ಟಾರ್ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ , ಜೊತೆಗೆ ತಮಿಳಿನ ನಟ ಸೂರ್ಯ ಅವರು ತಮ್ಮ ೨ ಡಿ ಎಂಟರ್ಟೈನ್ಮೆಂಟ್ ,ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಹಾಗು ನಿರ್ಮಾಪಕ ವೆಂಕಟ್ ಕೆವಿಎನ್ ಫೌಂಡೇಶನ್ ಮೂಲಕ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.
ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಅಪ್ಪು ಹೆಸರಿನ ಆಂಬುಲೆನ್ಸ್ ಇರಬೇಕು ಎನ್ನುವುದು ಪ್ರಕಾಶ್ ರಾಜ್ ಪ್ರತಿಷ್ಠಾನದ ಕನಸು ಎಂದು ಹಿರಿಯ ನಟ ಪ್ರಕಾಶ್ ರೈ ಹೇಳೀದ್ದಾರೆ.
ಮೊದಲನೇ ಆಂಬುಲೆನ್ಸ್ ಅನ್ನು ಮೈಸೂರಿಗೆ ಕೊಡುಗೆ ನೀಡಲಾಗಿತ್ತು ಅದರ ಮುಂದುವರೆದ ಭಾಗವಾಗಿ ಇನ್ನೂ ೫ ಆಂಬುಲೆನ್ಸ್ ರಾಜ್ಯದ ಐದು ಜಿಲ್ಲೆಗಳಿಗೆ ಜೀವ ಉಳಿಸುವಂಥ ಗುರುತರ ಹೊಣೆ ಹೊತ್ತು ಸಾಗುತ್ತಿವೆ. ಈ ಬಾರಿ ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರ್ಗಿಯ ಡಾ ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’. ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸಂಸ್ಥೆಗಳಿಗೆ ಆಂಬುಲೆನ್ಸ್ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ.
‘ಯಶೋಮಾರ್ಗ’ದ ಮೂಲಕ ಧಾರಾಳ ಸಹಾಯ ಹಸ್ತ ಚಾಚಿರುವ ಯಶ್ ಅವರಿಗೆ ಮತ್ತೆ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದ ಅರ್ಪಿಸುತ್ತೇನೆ.ಆಂಬುಲೆನ್ಸ್ ಗಳು ಅವುಗಳು ಸೇರಬೇಕಾದ ಆಸ್ಪತ್ರೆಗಳತ್ತ ಹೊರಟುಬಿಟ್ಟಿವೆ. ಇದನ್ನು ದೊಡ್ಡ ಕಾರ್ಯಕ್ರಮ ಮಾಡಿ ಹಸ್ತಾಂತರ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗುವ ಖರ್ಚಿನಲ್ಲೇ ಇನ್ನೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಬಿಡಬಹುದು ಎನ್ನುವುದು ನನ್ನ ಹಾಗೂ ಯಶ್ ಅವರ ಅನಿಸಿಕೆ ಎಂದು ಅವರು ತಿಳಿಸಿದ್ದಾರೆ.