
ಉತ್ತರಾಖಂಡ ,ನ.೯- ಮಾದಕ ವಸ್ತು ಕಳ್ಳಸಾಗಾಣಿಕೆಗೆ ಹೊಸ ಮಾರ್ಗಗಳನ್ನು ಹುಡುಕುವ ಮೂಲಕ ಮಾದಕ ದ್ರವ್ಯ ಕಳ್ಳಸಾಗಣೆದಾರರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿದ್ದಾರೆ.ರೋಗಿಗಳಿಗೆ ಜೀವದಾನ ನೀಡುವ ಆಂಬ್ಯುಲೆನ್ಸ್ ಗಳು ಮಾದಕ ವಸ್ತು ಕಳ್ಳಸಾಗಣೆಯ ಮಾರ್ಗವಾಗುತ್ತಿವೆ.
ಉತ್ತರಾಖಂಡ ಪೌರಿ ಜಿಲ್ಲೆಯಲ್ಲಿ ಇದೇ ಮಾದರಿಯ ಮಾದಕ ದ್ರವ್ಯ ಕಳ್ಳಸಾಗಣೆ ಕಂಡುಬಂದಿದೆ .ಇಲ್ಲಿಯ ಪೊಲೀಸರು ಆಂಬ್ಯುಲೆನ್ಸ್ ವಾಹನದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ೨ ಕ್ವಿಂಟಾಲ್‌ಗೂ ಹೆಚ್ಚು ಗಾಂಜಾ (೨೧೮ ಕೆಜಿ) ಜೊತೆಗೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಟೀಮ್ ಘಟ್ಟಿ, ತೋಟಂ ಮತ್ತು ದಬ್ರಾ ಸೌರಲ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ, ಅಲ್ಮೋರಾ ಪೊಲೀಸರು ಆಂಬ್ಯುಲೆನ್ಸ್ ನಿಲ್ಲಿಸಿ, ಪರಿಶೀಲನೆ ನಡೆಸಿದ್ದಾರೆ ಆಗ ರೋಗಿಯ ಬದಲಿಗೆ, ೧೬ ಚೀಲಗಳಲ್ಲಿ ಇರಿಸಲಾಗಿದ್ದ ೨೧೮ ಕೆಜಿ ಗಾಂಜಾ ಪತ್ತೆಯಾಗಿದೆ. ಇದನ್ನು ಸಾರೈಖೇತ್‌ನಿಂದ ಕಾಶಿಪುರಕ್ಕೆ ರವಾನೆ ಮಾಡಲಾಗುತ್ತಿದ್ದು , ಚಾಲಕನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳು ಪರಾರಿಯಾಗಿದ್ದಾರೆ.
ಪೊಲೀಸರಿಂದ ಬಂದ ಮಾಹಿತಿ ಪ್ರಕಾರ ಮೋಹನ್ ತಡೆಗೋಡೆಯಲ್ಲಿ ವಾಹನಗಳ ತಪಾಸಣೆ ನಡೆಸಲಾಗಿದೆ. ಇದೇ ವೇಳೆ ಅತಿವೇಗದಲ್ಲಿ ಸೈರನ್ ಹಾಕಿಕೊಂಡು ಬರುತ್ತಿದ್ದ ಆಂಬ್ಯುಲೆನ್ಸ್ ಚಾಲಕನನ್ನು ತಡೆದು ವಿಚಾರಣೆ ನಡೆಸಿದಾಗ ರೋಗಿಯನ್ನು ರಾಮನಗರಕ್ಕೆ ಕರೆದುಕೊಂಡು ಹೋಗುವುದಾಗಿ ಚಾಲಕ ತಿಳಿಸಿದ್ದಾನೆ, ಪೊಲೀಸರು ಆಂಬ್ಯುಲೆನ್ಸ್ ಒಳಗೆ ಹುಡುಕಿದಾಗ ಅಲ್ಲಿ ರೋಗಿಯ ಬದಲು ಆಂಬುಲೆನ್ಸ್‌ನಲ್ಲಿ ಗಾಂಜಾ ಪತ್ತೆಯಾಗಿದೆ. ವಿಚಾರಣೆ ವೇಳೆ, ಚಾಲಕ ತನ್ನ ಹೆಸರನ್ನು ರೋಷನ್ ಲಾಲ್ ಎಂದು ಬಹಿರಂಗಪಡಿಸಿದ್ದಾನೆ. ಆದರೆ ಚಾಲಕನ ಸಹ-ಆರೋಪಿ ಧರ್ಮೇಂದ್ರ ಥಾಲಿಸೈನ್ ಪರಾರಿಯಾಗಿದ್ದಾನೆ.
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಸಿಒ ರಾಣಿಖೇತ್ ಟಿಆರ್ ವರ್ಮಾ, ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.