
ಕೋಲಾರ,ಮಾ,೩೧-ಏಷ್ಯಾ ಖಂಡದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಾದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಿಗಳಿಗೆ ಒದಗಿಸಿರುವ ಸುಸಜ್ಜಿತ ಸೌಲಭ್ಯಗಳು ಮಾದರಿಯಾಗಿವೆ ಎಂದು ಆಂಧ್ರ ಪ್ರದೇಶದ ಮಲಕಲಚೆರುವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷೆ ಸಿ.ರಜನಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ವಿವಿಧ ಎಪಿಎಂಸಿ ಮಾರುಕಟ್ಟೆಗಳಿಗೆ ಮಲಕಲಚೆರುವು ಮಾರುಕಟ್ಟೆ ಸಮಿತಿಯೊಂದಿಗೆ ಭೇಟಿ ನೀಡಿದ ನಂತರ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ್ದ ಅವರಿಗೆ ಕೋಲಾರ ಎಪಿಎಂಸಿ ಕಾರ್ಯದರ್ಶಿ ಎನ್.ವಿಜಯಲಕ್ಷ್ಮಿ ಸ್ವಾಗತ ಕೋರಿ ಮಾರುಕಟ್ಟೆ ಪರಿಚಯಿಸಿದರು.
ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾರುಕಟ್ಟೆ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿ, ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಖ್ಯಾತಿ ಗಳಿಸಿದ್ದು, ಮಾರುಕಟ್ಟೆ ಆವರಣದಲ್ಲಿ ಸಿಸಿ ರಸ್ತೆಗಳು, ಸ್ವಚ್ಚತೆ, ಕುಡಿಯುವ ನೀರಿನ ಸೌಲಭ್ಯ, ತ್ಯಾಜ್ಯ ವಿಲೇವಾರಿ ಸೇರಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ನಡುವೆ ಟೊಮೆಟೋ ಮಾರುಕಟ್ಟೆಗೆ ಜಾಗದ ಕೊರತೆ ಇದ್ದು, ಇರುವ ಸ್ಥಳದಲ್ಲೇ ಸೌಲಭ್ಯಗಳನ್ನು ಒದಗಿಸಲಾಗಿದೆ, ಉಳಿದಂತೆ ಮಾರುಕಟ್ಟೆ ವಿಸ್ತರಣೆಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಜಮೀನು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಮಾರುಕಟ್ಟೆ ಆವರಣ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲಾಗಿದೆ, ಚರಂಡಿ ವ್ಯವಸ್ಥೆ ಕಲ್ಪಿಸಿಲಾಗಿದೆ, ತ್ಯಾಜ್ಯ ವಿಲೇವಾರಿಗೂ ಕ್ರಮವಹಿಸಿದ್ದು, ರೈತರಿಗೆ ಅಗತ್ಯವಾದ ವಿಶ್ರಾಂತಿ ತಾಣವೂ ಇದೆ, ಮಾರುಕಟ್ಟೆ ಆವರಣದಲ್ಲೇ ಬ್ಯಾಂಕಿಂಗ್ ಸೌಲಭ್ಯವಿದೆ ಎಂದು ತಿಳಿಸಿದರು.
ಮಾರುಕಟ್ಟೆ ಪ್ರಾಂಗಣದಲ್ಲಿ ನಿಯಮಾನುಸಾರ ವಹಿವಾಟಿಗೆ ಕ್ರಮವಹಿಸಿದ್ದು, ರೈತರು, ವ್ಯಾಪಾರಿಗಳ ಹಿತ ಕಾಯಲು ಗಮನಹರಿಸಲಾಗಿದೆ, ಮಾರುಕಟ್ಟೆಗೆ ಟೊಮೆಟೋ ಮಾತ್ರವಲ್ಲ, ಇತರೆಲ್ಲಾ ತರಕಾರಿಗಳ ಆವಕವೂ ಬರುತ್ತದೆ ಎಂದು ತಿಳಿಸಿದರು.