
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,7- ನೆರೆಯ ಆಂಧ್ರದಿಂದ ತಂದು. ಕಡಿಮೆ ಬೆಲೆಗೆ ಮಾರಾಟ ಮಾಡುವ ಬಿತ್ತನೆ ಬೀಜಗಳನ್ನು ರೈತರು ಖರೀದಿಸಿ ಮೋಸ ಹೋಗಬಾರದೆಂದು ರಾಯಚೂರು ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥ ಡಾ. ಬಸವಣ್ಣೆಪ್ಪ ಸಲಹೆ ನೀಡಿದ್ದಾರೆ.
ಅವರು ನಿನ್ನೆ ತಾಲೂಕಿನ ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದದಲ್ಲಿ. ಚಿಕ್ಕಜೋಗಿಹಳ್ಳಿ ನವೋದಯ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ನೆರೆಯ ಆಂಧ್ರದಲ್ಲಿ ಕಳಪೆ ಬೀಜವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸದೆ, ಮನೆಗಳಲ್ಲೇ ಸಿದ್ಧಪಡಿಸಿ, ರಾಜ್ಯದ ಗಡಿಭಾಗದ ಗ್ರಾಮಗಳಿಗೆ ತಂದು ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತದೆ. ಕಡಿಮೆ ಬೆಲೆಯೆಂದು ಈ ಬೀಜಗಳನ್ನು ಖರೀದಿಸಿದ ರೈತರು, ಬಿತ್ತನೆ ಮಾಡಿದ ಬಳಿಕ ಸಮರ್ಪಕವಾಗಿ ಇಳುವರಿ ಬರದೆ, ಮೋಸ ಹೋಗಿದ್ದು, ನಷ್ಟವಾಗಿದ್ದು ಅರಿವಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೀರಿ. ಹಾಗಾಗಿ ಮೋಸ ಹೋಗುವ ಮುನ್ನವೇ ಆಂಧ್ರದಿಂದ ತಂದು ಮಾರಾಟ ಮಾಡುವ ಕಳಪೆ ಬೀಜಗಳನ್ನು ಖರೀದಿಸಬಾರದೆಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ರೈತರು ಸಾವಯವ ಕೃಷಿ ಪದ್ಧತಿಯನ್ನು ಮರೆಯುತ್ತಿದ್ದಾರೆ. ಆಧುನಿಕತೆ ಹೆಸರಲ್ಲಿ ಅನಿಯಮಿತವಾಗಿ ರಸಾಯನಿಕ ಬಳಕೆ ಮಾಡಿ ಭೂಮಿಯ ಫಲವತ್ತತೆಯನ್ನು ರೈತರೇ ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಕ್ಕದ ರೈತ ಹತ್ತು ಚೀಲ ರಸಾಯನಿಕ ಗೊಬ್ಬರ ಬಳಸಿದ್ದಾನೆ ಎಂದು ಮತ್ತೊಬ್ಬರು ಹೆಚ್ಚು ಬಳಕೆ ಮಾಡುವುದಾಗಿದೆ. ರಸಾಯನಿಕ ಗೊಬ್ಬರ ಬಳಕೆಯಲ್ಲೂ ವೈಜ್ಞಾನಿಕ ಕ್ರಮಗಳು ಇಲ್ಲ. ಹಾಗಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದರು.
ರೈತರು ಭೂಮಿಯ ಫಲವತ್ತತೆ ಕಾಪಾಡಬೇಕು ಎಂದರೆ, ಬೇಸಿಗೆಯಲ್ಲೇ ಕೃಷಿ ಚಟುವಟಿಕೆಗಳನ್ನು ಆರಂಭಿಸಬೇಕು. ಬಿಸಿಲು ಹೆಚ್ಚಾಗಿರುವ ದಿನಗಳಲ್ಲಿ ಹೊಲಗಳಲ್ಲಿ ಮಡಿಕೆ ಒಡೆದು, ಮಣ್ಣನ್ನು ಬಿಸಿಲಿಗೆ ಒಣಗಲು ಬಿಡಬೇಕು. ಇದರಿಂದ ಭೂಮಿ ಫಲವತ್ತತೆಯನ್ನು ಕಾಪಾಡಿಕೊಳ್ಳುತ್ತದೆ. ಜತೆಗೆ ಮಣ್ಣಿನ ಫಲವತ್ತತೆಗೆ ತಕ್ಕಂತೆ ಬೀಜಗಳನ್ನು ಬಿತ್ತನೆ ಮಾಡಿ ಬೆಳೆಯನ್ನು ಬೆಳೆಯಬೇಕು. ಹೆಚ್ಚಾಗಿ ಸಾವಯವ ಕೃಷಿ ಮಾಡಬೇಕು. ಪಕ್ಕದಲ್ಲಿ ಒಬ್ಬರು ಬಿತ್ತನೆ ಮಾಡಿದ್ದಾರೆಂದು ಎಲ್ಲರೂ ಅದೇ ಬೀಜಗಳನ್ನು ಬಿತ್ತನೆ ಮಾಡಿ, ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ನಷ್ಟಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವ ಪದ್ಧತಿ ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚುತ್ತಿದೆ. ರೈತರು ವಾಣಿಜ್ಯ ಬೆಳೆಯಾದ ಹತ್ತಿ, ಮೆಕ್ಕೆಜೋಳ, ಭತ್ತದಿಂದ ವಿಮುಖವಾಗಿ ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ. ಒಂದು ವರ್ಷ ಮೆಣಸಿನಕಾಯಿ ಬೆಳೆದು, ಮುಂದಿನ ವರ್ಷ ಮೆಕ್ಕೆಜೋಳ ಬೆಳೆದರೆ ಹೆಚ್ಚು ಇಳುವರಿ ನೋಡಬಹುದು. ಭತ್ತದ ಬೆಳೆ ಜಿಎನ್‌ವಿ ೧೧೯ ಸಂಖ್ಯೆಯ ತಳಿಯನ್ನು ಸವಳು ಭೂಮಿಯಲ್ಲಿ ಬಿತ್ತನೆ ಮಾಡಿ ಬೆಳೆಯಬಹುದೆಂದರು.
ರೂಪನಗುಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾರುತಿ ಪ್ರಸಾದ್, ಕಮ್ಮರಚೇಡು ಗ್ರಾಮದ ರೈತರಾದ ತಿಪ್ಪೆರುದ್ರಗೌಡ, ವೀರೇಶ್ ಗೌಡ, ಸಿದ್ದನಗೌಡ, ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳಾದ ಜಂಬನಗೌಡ, ರಾಧಾಕೃಷ್ಣ ರೆಡ್ಡಿ, ಎಂ.ಪಿ.ಶ್ರೀನಿವಾಸ್ ರೆಡ್ಡಿ, ಸಿ ಶರಣಬಸವ ಡಾ. ಜೆ.ಸಂದೀಪ್ ಜಾನೆಕುಂಟೆ, ಗಂಗಾಧರ, ದಾದಾ ಖಲಂದರ್, ಇಮ್ರಾನ್ ಅಹಮದ್ ನರಸಿಂಹ ರೆಡ್ಡಿ, ಸಿದ್ದೇಶ್ ಊಳೂರು ಮೊದಲಾದವರು ಇದ್ದರು.