ಆಂಧ್ರದಲ್ಲಿ ವರುಣನ ಆರ್ಭಟ, ಇದುವರೆಗೆ 14 ಮಂದಿ ಸಾವು

ಕಡಪ, (ಆಂಧ್ರಪ್ರದೇಶ),ನ.19- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಮೃತರ ಸಂಖ್ಯೆ 14 ಕಕ್ಕೇರಿದೆ.
ಭೂ ಕುಸಿತ, ಪ್ರವಾಹ ಸೇರಿದಂತೆ ವರುಣನ ಅಬ್ಬರಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ತಲಾ ಐದು ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ.
ಚಿತ್ತೂರು, ಕಡಪ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಜನರು ಮಧ್ಯದಾರಿಯಲ್ಲಿ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದಾರೆ.
ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲವಂತೂ ಪ್ರವಾಹ-ಭೂಕುಸಿತ ಎರಡಕ್ಕೂ ತುತ್ತಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀರು ನುಗ್ಗಿದ್ದು, ಒಳಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿತ್ತೂರು ಜಿಲ್ಲೆಯ ಬಲಿಜೆಪಲ್ಲಿ ಹಳ್ಳದ ಪ್ರವಾಹದಲ್ಲಿ ಬಂಗಾರುಪಳ್ಳಂ ಮಂಡಲದ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದರು. ಅವರಲ್ಲಿ ಒಬ್ಬರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಇನ್ನೂ ಮೂವರು ಮಹಿಳೆಯರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅಧಿಕಾರಿಗಳನ್ನು, ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ನೋಡ ನೋಡುತ್ತಲೇ ಕಟ್ಟಡವೊಂದು ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.