ಆಂಧ್ರದಲ್ಲಿ ಭಾರೀ ಮಳೆ ರಸ್ತೆ, ರೈಲು ಸಂಪರ್ಕ ಕಡಿತ

ಅಮರಾವತಿ, ನ. ೨೧- ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆ ಹಾಗೂ ರೈಲು ಮಾರ್ಗಗಳ ಸಂಚಾರ ಕಡಿದು ಹೋಗಿದೆ. ಪೆನ್ನಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಪೂರ್ವ ಭಾಗಗಳಿಗೆ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.
ನೆಲ್ಲೂರು ಜಿಲ್ಲೆಯ ಪಡುಗುಪಾಡು ಬಳಿ ಚೆನ್ನೈ, ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ ೧೬ರಲ್ಲಿ ಕುಸಿತ ಉಂಟಾಗಿ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಕಿಲೊ ಮೀಟರ್‌ಗಟ್ಟಲೆ ವಾಹನ ನಿಂತಿವೆ.
ನೆಲ್ಲೂರು ಬಸ್ ನಿಲ್ದಾಣ ಬಸ್ ಗಳಿಂದ ತುಂಬಿ ಹೋಗಿವೆ.
ಪಡುಗುಪಾಡು ಬಳಿ ರೈಲು ಹಳಿ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಇದರಿಂದಾಗಿ ಚೆನ್ನೈ, ವಿಜಯವಾಡ ಮಾರ್ಗವಾಗಿ ಚಲಿಸುವ ೧೭ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ. ಇಲ್ಲವೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಸೋಮಶೀಲಾ ಅಣೆಕಟ್ಟೆಯಿಂದ ೨ ಲಕ್ಷಕ್ಕೂ ಅಧಿಕ ಕ್ಯುಸೆಕ್ಸ್ ನೀರು ಹೊರಬಿಟ್ಟಿರುವ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗಿದೆ.